ADVERTISEMENT

ಉಕ್ರೇನ್ ಸೇನಾ ಬತ್ತಳಿಕೆಗೆ ಅತ್ಯಾಧುನಿಕ ‘ಅಬ್ರಾಮ್ಸ್‌’ ಯುದ್ಧ ಟ್ಯಾಂಕ್‌

ಟ್ಯಾಂಕ್‌ಗಳೊಂದಿಗೆ ಸಹಾಯಕ ವಾಹನಗಳನ್ನೂ ಕಳುಹಿಸಿಕೊಡಲಿದೆ ಅಮೆರಿಕ

ಏಜೆನ್ಸೀಸ್
Published 26 ಜನವರಿ 2023, 17:49 IST
Last Updated 26 ಜನವರಿ 2023, 17:49 IST
   

ವಾಷಿಂಗ್ಟನ್: ಉಕ್ರೇನ್‌ ಪೂರ್ವದಿಂದ ರಷ್ಯಾ ಪಡೆಗಳನ್ನು ಹಿಮ್ಮೆಟ್ಟಿಸಲು ಉಕ್ರೇನ್‌ ಸೇನೆಗೆ ಬಲ ತುಂಬುವ ಅತ್ಯಾಧುನಿಕ 31 ‘ಅಬ್ರಾಮ್ಸ್’ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಘೋಷಿಸಿದರು.

ಉಕ್ರೇನ್‌ಗೆ ಸೇನಾ ನೆರವು ನೀಡುವ ಸಂಬಂಧ ಬೈಡನ್ ಅವರು ಬುಧವಾರ ಜರ್ಮನಿಯ ಚಾನ್ಸಲರ್‌ ಓಲಾಫ್‌ ಸ್ಕೋಲ್ಜ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಜತೆಗೆ ಚರ್ಚೆ ನಡೆಸಿದ್ದರು. ನಂತರ ಅವರು ಈ ಘೋಷಣೆ ಮಾಡಿದ್ದಾರೆ.

ಉಕ್ರೇನ್‌ಗೆ ‘ಅಬ್ರಾಮ್ಸ್’ ಯುದ್ಧ ಟ್ಯಾಂಕ್‌ ನೀಡಲು ಅಮೆರಿಕ ಸಮ್ಮತಿಸಿದ್ದ ಬೆನ್ನಲ್ಲೇ ಜರ್ಮನಿ ಮತ್ತು ಅದರ ಮಿತ್ರ ರಾಷ್ಟ್ರಗಳು ತಮ್ಮಲ್ಲಿರುವ ಅತ್ಯಾಧುನಿಕ ಲೆಪರ್ಡ್‌–2 ಯುದ್ಧ ಟ್ಯಾಂಕ್‌ಗಳನ್ನು ಪೂರೈಸಲು ಒಪ್ಪಿ, ಅಧಿಕೃತ ಹೇಳಿಕೆ ಪ್ರಕಟಿಸಿದ್ದವು.

ADVERTISEMENT

‘ಉಕ್ರೇನ್‌ಗೆ ತನ್ನ ನೆಲ ರಕ್ಷಿಸಿಕೊಳ್ಳಲು ಮತ್ತು ಕಾರ್ಯತಂತ್ರದ ಉದ್ದೇಶಗಳನ್ನು ಸಾಧಿಸಲು ಅಬ್ರಾಮ್ಸ್‌ ಟ್ಯಾಂಕ್‌ ನೆರವಾಗಲಿದ್ದು, ಇವುಗಳನ್ನು ನೀಡುವಂತೆ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಶಿಫಾರಸು ಮಾಡಿ ದ್ದರು. ಈ ಯುದ್ಧ ಟ್ಯಾಂಕ್‌ ವಿಶ್ವದಲ್ಲೇ ಅತ್ಯಂತ ಸಮರ್ಥವಾದುದು. ಒಂದು ಟ್ಯಾಂಕ್‌ ಉಕ್ರೇನ್‌ನ ಒಂದು ಬೆಟಾಲಿ ಯನ್‌ಗೆ ಸರಿ‌ಸಮ. ಇದರ ಕಾರ್ಯನಿರ್ವಹಣೆ ಅತ್ಯಂತ ಸವಾಲಿನದು. ಉಕ್ರೇನ್‌ ಸೈನಿಕರಿಗೆ ಅಗತ್ಯ ತರಬೇತಿ ನೀಡಲಾಗುವುದು. ಜತೆಗೆ ಎಂಟು ಎ88 ಪೂರಕ ವಾಹನಗಳನ್ನೂ ಕಳುಹಿಸಲಾಗುವುದು’ ಎಂದು ಬೈಡನ್‌ ಹೇಳಿದ್ದಾರೆ.

ಸ್ವರಕ್ಷಣೆಗೆ ಸೀಮಿತ ಗೊಂಡಿದ್ದ ಕೀವ್‌ ಸೇನೆಗೆ ಇಂತಹ ಸುಧಾರಿತ ಯುದ್ಧ ಟ್ಯಾಂಕ್‌ಗಳು ಲಭಿಸಿದರೆ, 12ನೇ ತಿಂಗಳಿಗೆ ಕಾಲಿಟ್ಟಿರುವ ರಷ್ಯಾ ಪಡೆಗಳನ್ನು ಹೊರದಬ್ಬಲು ಭಾರಿ ಬಲಸಿಕ್ಕಂತಾಗಲಿದೆ ಎನ್ನುವುದು ಪಶ್ಚಿಮ ರಾಷ್ಟ್ರಗಳ ಸೇನಾ ತಜ್ಞರ ಲೆಕ್ಕಾಚಾರ.

ರಷ್ಯಾ ಕ್ಷಿಪಣಿ, ಡ್ರೋನ್‌ ದಾಳಿ ತೀವ್ರ

ರಷ್ಯಾ ಪಡೆಗಳು ಗುರುವಾರ ದೇಶದಾದ್ಯಂತ ಕ್ಷಿಪಣಿ ಮತ್ತು ಸ್ವಯಂ ಸ್ಫೋಟಿಸುವ ಡ್ರೋನ್‌ಗಳ ವ್ಯಾಪಕ ದಾಳಿ ನಡೆಸಿವೆ ಎಂದು ಉಕ್ರೇನ್‌ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕ, ಜರ್ಮನಿ ಅತ್ಯಾಧುನಿಕ ಯುದ್ಧ ಟ್ಯಾಂಕ್‌ಗಳನ್ನು ಉಕ್ರೇನ್‌ಗೆ ಪೂರೈಸುವುದನ್ನು ಘೋಷಿಸಿದ ಬೆನ್ನಲ್ಲೇ ರಷ್ಯಾ ಮತ್ತೆ ದಾಳಿ ತೀವ್ರಗೊಳಿಸಿದೆ. ಈ ದಾಳಿಯಿಂದ 11 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ ನಗರಕ್ಕೆ ಅಪ್ಪಳಿಸಿದ 15 ಕ್ರೂಸ್‌ ಕ್ಷಿಪಣಿಗಳನ್ನು ವಾಯು ರಕ್ಷಣಾ ವ್ಯವಸ್ಥೆಯಿಂದ ಸೇನೆ ಹೊಡೆದುರುಳಿಸಿದೆ. ಕೀವ್‌ನ ನಿಪ್ರೊವ್‌ಸ್ಕಿಯಲ್ಲಿ ಪ್ರಬಲ ಸ್ಫೋಟದ ಶಬ್ದ ಕೇಳಿಸಿದೆ. ದೇಶದಾದ್ಯಂತ ವಾಯು ದಾಳಿ ಎಚ್ಚರಿಕೆಯ ಸಂದೇಶಗಳು ಇಡೀ ದಿನ ಮೊಳಗಿದವು ಎಂದು ಕೀವ್‌ ನಗರಾಡಳಿತದ ಮುಖ್ಯಸ್ಥರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.