ಮಾಸ್ಕೊ: ‘ಪರಮಾಣು ಶಸ್ತ್ರಾಸ್ತ್ರಗಳ ಬಳಕೆ ಮಿತಿಗೆ ಸಂಬಂಧಿಸಿದಂತೆ ಅಮೆರಿಕದ ಜತೆಗೆ ರಷ್ಯಾ ಹೊಂದಿರುವ ಒಪ್ಪಂದವು ಮುಂದಿನ ಫೆಬ್ರುವರಿಯಲ್ಲಿ ಅಂತ್ಯವಾಗಲಿದೆ. ಅದಾದ ಬಳಿಕವೂ ಒಂದು ವರ್ಷದವರೆಗೆ ನಾವು ಒಪ್ಪಂದಕ್ಕೆ ಬದ್ಧವಾಗಿರಲಿದ್ದೇವೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸೋಮವಾರ ಹೇಳಿದ್ದಾರೆ.
ಉಭಯ ರಾಷ್ಟ್ರಗಳ ಬಳಿ ಇರುವ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಗೆ ನಿಗದಿತ ಮಿತಿ ವಿಧಿಸುವ ಕಾರ್ಯತಂತ್ರದ ಭಾಗವಾಗಿ ‘ನ್ಯೂ ಸ್ಟಾರ್ಟ್’ ಎಂಬ ಒಪ್ಪಂದವನ್ನು ರಷ್ಯಾ ಮತ್ತು ಅಮೆರಿಕ ಮಾಡಿಕೊಂಡಿವೆ. ಈ ಒಪ್ಪಂದವು ಮುಂಬರಲಿರುವ ಫೆಬ್ರುವರಿಯಲ್ಲಿ ಅಂತ್ಯವಾಗಲಿದೆ.
ಈ ನಡುವೆಯೇ ರಷ್ಯಾ ಭದ್ರತಾ ಮಂಡಳಿಯ ಜತೆಗೆ ಪುಟಿನ್ ಸಭೆ ನಡೆಸಿದ್ದಾರೆ. ಈ ವೇಳೆ, ‘ಒಪ್ಪಂದವನ್ನು ಅಂತ್ಯಗೊಳಿಸುವುದರಿಂದ ಜಾಗತಿಕ ಸ್ಥಿರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿದೆ. ಹೀಗಾಗಿ ಇನ್ನೂ ಒಂದು ವರ್ಷ ಒಪ್ಪಂದದಲ್ಲೇ ಮುಂದುವರಿಯಲು ನಿರ್ಧರಿಸಲಾಗಿದೆ’ ಎಂದಿದ್ದಾರೆ.
ಅಲ್ಲದೇ, ‘ಅಮೆರಿಕ ಕೂಡ ರಷ್ಯಾದ ನಡೆಯನ್ನೇ ಅನುಸರಿಸಿ, ಒಪ್ಪಂದಕ್ಕೆ ಬದ್ಧವಾಗಿರಲಿದೆ ಎಂದು ಭಾವಿಸುತ್ತೇವೆ’ ಎಂದೂ ಪುಟಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.