ADVERTISEMENT

ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ: 15 ಸಾವು, 116 ಮಂದಿಗೆ ಗಾಯ 

ಏಜೆನ್ಸೀಸ್
Published 17 ಜೂನ್ 2025, 12:28 IST
Last Updated 17 ಜೂನ್ 2025, 12:28 IST
–
   

ಕೀವ್‌: ಉಕ್ರೇನ್‌ ರಾಜಧಾನಿ ಕೀವ್‌ನ ವಸತಿ ಪ್ರದೇಶಗಳನ್ನು ಗುರಿಯಾಗಿಸಿ ರಷ್ಯಾ ರಾತ್ರೋರಾತ್ರಿ ಕ್ಷಿಪಣಿ ಹಾಗೂ ಡ್ರೋನ್‌ಗಳ ದಾಳಿ ನಡೆಸಿದೆ. ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದು, 116 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದು ಕೀವ್‌ ಮೇಲೆ ಇತ್ತೀಚೆಗೆ ನಡೆದ ಬಹುದೊಡ್ಡ ದಾಳಿ ಎಂದೂ ಹೇಳಲಾಗಿದೆ. 

27 ಪ್ರದೇಶಗಳನ್ನು ಗುರಿಯಾಗಿಸಿ ಸತತ 9 ಗಂಟೆಗಳ ಕಾಲ ದಾಳಿ ನಡೆಸಲಾಗಿದೆ. 9 ಅಂತಸ್ತಿನ ವಸತಿ ಸಮುಚ್ಚಯದ ಮೇಲೆ ಖಂಡಾಂತರ ಕ್ಷಿಪಣಿ ಮೂಲಕ ದಾಳಿ ನಡೆದಿದ್ದು, 30ಕ್ಕೂ ಅಧಿಕ ಅಪಾರ್ಟ್‌ಮೆಂಟ್‌ಗಳು ನಾಶಗೊಂಡಿವೆ. ಬಂದರು ನಗರಿ ಒಡೆಸಾದ ಮೇಲೆ ನಡೆದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ ಎಂದು ಕೀವ್‌ ಸಿಟಿ ಮಿಲಿಟರಿ ಆಡಳಿತದ ಮುಖ್ಯಸ್ಥ ತೈಮೂರ್‌ ಕಾಚೆಂಕೊ ತಿಳಿಸಿದ್ದಾರೆ. 

ದಾಳಿಯನ್ನು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಖಂಡಿಸಿದ್ದು,‘ 440 ಡ್ರೋನ್‌, 32 ಕ್ಷಿಪಣಿಗಳ ಮೂಲಕ ರಾತ್ರೋರಾತ್ರಿ ಉಕ್ರೇನ್‌ ಮೇಲೆ ರಷ್ಯಾ ದಾಳಿ ನಡೆಸಿದೆ. ಯುದ್ಧ ಮುಂದುವರಿಸಲೆಂದೇ ಪುಟಿನ್‌ ಈ ಕೃತ್ಯ ನಡೆಸುತ್ತಿದ್ದಾರೆ. ಇದು ಅತ್ಯಂತ ಭೀಕರ ದಾಳಿಯಾಗಿದ್ಗು, ಜಗತ್ತಿನ ಅತ್ಯಂತ ಶಕ್ತಿ ಶಾಲಿಗಳೆಲ್ಲಾ ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವುದರಿಂದ ಇದು ನಡೆಯುತ್ತಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.