ADVERTISEMENT

ಕೊಲ್ಲಬೇಕಾದವರ, ಬಂಧಿಸಬೇಕಾದವರ ಪಟ್ಟಿ ಮಾಡುತ್ತಿದೆ ರಷ್ಯಾ ಸೇನೆ: ಅಮೆರಿಕ ಆರೋಪ

ಐಎಎನ್ಎಸ್
Published 21 ಫೆಬ್ರುವರಿ 2022, 10:37 IST
Last Updated 21 ಫೆಬ್ರುವರಿ 2022, 10:37 IST
ಅಜ್ಞಾತ ಸ್ಥಳದಲ್ಲಿ ಉಕ್ರೇನ್ ಸೇನೆಯ ತಾಲೀಮು (ಎಎಫ್‌ಪಿ ಚಿತ್ರ)
ಅಜ್ಞಾತ ಸ್ಥಳದಲ್ಲಿ ಉಕ್ರೇನ್ ಸೇನೆಯ ತಾಲೀಮು (ಎಎಫ್‌ಪಿ ಚಿತ್ರ)    

ನವದೆಹಲಿ: ‘ಉಕ್ರೇನ್‌ ಮೇಲೆ ದಾಳಿ ಮಾಡಿದ ನಂತರ ಅಲ್ಲಿ ಯಾರನ್ನು ಕೊಲ್ಲಬೇಕು, ಯಾರನ್ನು ಬಂಧಿಸಬೇಕು ಎಂಬುದರ ಪಟ್ಟಿಯನ್ನು ರಷ್ಯಾ ಸಿದ್ಧಪಡಿಸುತ್ತಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ’ ಎಂದು ಅಮೆರಿಕ ಸೋಮವಾರ ಹೇಳಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಮಾಡಿದೆ.

‘ಶಾಂತಿಯುತ ಪ್ರತಿಭಟನೆ, ನಾಗರಿಕರ ಪ್ರತಿರೋಧವನ್ನು ಹತ್ತಿಕ್ಕಲು ರಷ್ಯಾದ ಪಡೆಗಳು ಮಾರಣಾಂತಿಕ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂಬ ಮಾಹಿತಿ ನಮ್ಮಲ್ಲಿದೆ’ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿರುವ ಬತ್‌ಶೇಬಾ ನೆಲ್ ಕ್ರೋಕರ್ ಹೇಳಿದ್ದಾರೆ.

‘ರಷ್ಯಾವನ್ನು ತಡೆಯುವ ಎಲ್ಲ ಪ್ರಯತ್ನಗಳನ್ನು ಅಮೆರಿಕ ಮಾಡುತ್ತಿದೆ. ಅದರ ನಡುವೆಯೇ ಅಮೆರಿಕ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕನ್‌ ಅವರು, ಫೆ.17ರ ಭದ್ರತಾ ಮಂಡಳಿಯ ಸಭೆಯಲ್ಲಿ ಪರಿಸ್ಥಿತಿಯ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಉಕ್ರೇನ್‌ನ ನಿರ್ದಿಷ್ಟ ಗುಂಪುಗಳ ಮೇಲೆ ದಾಳಿ ನಡೆಸಲು ರಷ್ಯಾ ಯೋಜನೆ ರೂಪಿಸುತ್ತಿದೆ ಎಂದು ಸಭೆಯಲ್ಲಿ ಬ್ಲಿಂಕನ್‌ ಹೇಳಿದ್ದರು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ ಕ್ರೋಕರ್‌ ಹೇಳಿದ್ದಾರೆ.

ADVERTISEMENT

ಉಕ್ರೇನ್‌ ಮೇಲಿನ ರಷ್ಯಾದ ಆಕ್ರಮಣವು ಮಾನವ ಹಕ್ಕುಗಳ ವಿಚಾರದಲ್ಲಿ ವ್ಯಾಪಕವಾದ ಹಾನಿ ಉಂಟುಮಾಡಲಿದೆ. ದುರಂತವನ್ನು ಸೃಷ್ಟಿ ಮಾಡಲಿದೆ’ ಎಂದು ಕ್ರೋಕರ್‌ ಕಳವಳ ವ್ಯಕ್ತಪಡಿಸಿದ್ದಾರೆ.

‘ಉಕ್ರೇನ್‌ನ ಭಾಗಗಳಲ್ಲಿ ರಷ್ಯಾದ ನಿರಂತರ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ನಮಗೆ ತೀವ್ರ ಆತಂಕವಿದೆ. ಮಿಲಿಟರಿ ಆಕ್ರಮಣದ ನಂತರ ಕಳವಳ ಮತ್ತಷ್ಟು ಹೆಚ್ಚಾಗಲಿದೆ. ಅದಕ್ಕೆ ಸೂಕ್ತ ಕಾರಣಗಳೂ ಇವೆ. ಇತ್ತೀಚೆಗೆ ಅಮೆರಿಕಕ್ಕೆ ಸಿಕ್ಕ ಮಾಹಿತಿಯನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ಆಕ್ರಮಣ ಮಾಡಿದ ನಂತರ ರಷ್ಯಾ ಮಾನವ ಹಕ್ಕು ಉಲ್ಲಂಘನೆ ಎನಿಸುವಂಥ ಕ್ರಮಗಳ ಜಾರಿಗೆ ಯೋಜನೆ ರೂಪಿಸುತ್ತಿದೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ರಷ್ಯಾದ ಕಾರ್ಯಾಚರಣೆ ವೇಳೆ, ಹತ್ಯೆ, ಅಪಹರಣ, ಅಕ್ರಮ ಬಂಧನ, ಚಿತ್ರಹಿಂಸೆಗಳು ನಡೆಯಲಿವೆ. ಉಕ್ರೇನ್‌ನಲ್ಲಿ ಗಡಿಪಾರಾದ ರಷ್ಯನ್ನರು, ಬೆಲರೂಸ್‌ನ ಭಿನ್ನಮತೀಯರು ಸೇರಿದಂತೆ ರಷ್ಯಾದ ಕ್ರಮಗಳನ್ನು ವಿರೋಧಿಸುವವರ ಮೇಲೆ ದಾಳಿ ನಡೆಯಬಹುದು. ಪತ್ರಕರ್ತರು, ಭ್ರಷ್ಟಾಚಾರ ವಿರೋಧಿ ಹೋರಾಟಗಾರರು, ಧಾರ್ಮಿಕ ಮತ್ತು ಜನಾಂಗೀಯ, ಲಿಂಗತ್ವ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯಬಹುದು’ ಎಂದು ಅವರು ಆತಂಕಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.