ADVERTISEMENT

ಉಕ್ರೇನ್‌ನಲ್ಲಿ 153 ಮಕ್ಕಳ ಜೀವ ತೆಗೆದ ರಷ್ಯಾ ಸೇನೆಯ ಆಕ್ರಮಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 11:45 IST
Last Updated 1 ಏಪ್ರಿಲ್ 2022, 11:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಫೆಬ್ರುವರಿ 24ರಿಂದ ಉಕ್ರೇನ್‌ ಮೇಲೆ ರಷ್ಯಾ ಸೇನಾ ಪಡೆಗಳು ಆಕ್ರಮಣ ನಡೆಸುತ್ತಿದ್ದು, ದಾಳಿಯಲ್ಲಿ ಇದುವರೆಗೂ153 ಮಕ್ಕಳು ಸಾವಿಗೀಡಾಗಿರುವುದಾಗಿ ಉಕ್ರೇನ್‌ನ ಪ್ರಾಸಿಕ್ಯೂಟರ್‌ ಜನರಲ್‌ ಕಚೇರಿ ತಿಳಿಸಿದೆ.

'ರಷ್ಯಾ ಪಡೆಗಳ ದಾಳಿಯಿಂದ ಸುಮಾರು 400 ಮಕ್ಕಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರಲ್ಲಿ 153 ಮಕ್ಕಳು ಮೃತಪಟ್ಟಿದ್ದು, 245ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೀವ್‌ ಮೇಲೆ ರಷ್ಯಾ ಪಡೆಗಳು ದಾಳಿ ಆರಂಭಿಸಿ 37 ದಿನಗಳು ಕಳೆಯುತ್ತಿವೆ.

ಕೀವ್‌ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ (73) ಮಕ್ಕಳು ಸಾವಿಗೀಡಾಗಿದ್ದಾರೆ. ಡೊನೆಟ್ಸ್ಕ್‌ನಲ್ಲಿ 65 ಮಕ್ಕಳು ಹಾಗೂ ಹಾರ್ಕಿವ್‌ನಲ್ಲಿ 46 ಮಕ್ಕಳು ದಾಳಿಗಳಿಂದಾಗಿ ಮೃತಪಟ್ಟಿದ್ದಾರೆ. ರಷ್ಯಾ ಸೇನಾ ಪಡೆಗಳು ಸುತ್ತುವರಿದಿರುವ ಮರಿಯುಪೊಲ್‌ ಮತ್ತು ಚೆರ್ನಿಹಿವ್‌ನಲ್ಲಿ ಮಕ್ಕಳ ಸಾವಿನ ಸಂಖ್ಯೆಯ ಲೆಕ್ಕ ಇದರಲ್ಲಿ ಸೇರಿಲ್ಲ ಎಂದು ಅಲ್‌ ಜಝೀರಾ ವರದಿ ಮಾಡಿದೆ.

ADVERTISEMENT
ದೇಶ ತೊರೆದಿರುವ ಉಕ್ರೇನ್‌ ಪ್ರಜೆಗಳು

ಬಾಂಬ್‌ ಮತ್ತು ಷೆಲ್‌ ದಾಳಿಗಳಿಂದಾಗಿ ಉಕ್ರೇನ್‌ನಲ್ಲಿ 859 ಶಿಕ್ಷಣ ಸಂಸ್ಥೆಗಳು ಹಾನಿಗೆ ಒಳಗಾಗಿವೆ. ಅವುಗಳಲ್ಲಿ 83 ಕಟ್ಟಡಗಳು ಸಂಪೂರ್ಣ ನಾಶಗೊಂಡಿವೆ.

ಉಕ್ರೇನ್‌ನೊಂದಿಗೆ ಶಾಂತಿ ಮಾತುಕತೆ ಮುಂದುವರಿದಿರುವುದಾಗಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.