ADVERTISEMENT

ಹಾರ್ಕಿವ್: ಪ್ರಾದೇಶಿಕ ಆಡಳಿತದ ಕಟ್ಟಡ, ವಸತಿ ಪ್ರದೇಶಗಳಲ್ಲಿ ರಷ್ಯಾ ಕ್ಷಿಪಣಿ ದಾಳಿ

ರಾಯಿಟರ್ಸ್
Published 1 ಮಾರ್ಚ್ 2022, 10:38 IST
Last Updated 1 ಮಾರ್ಚ್ 2022, 10:38 IST
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿನ ದೃಶ್ಯ
ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿನ ದೃಶ್ಯ   

ಹಾರ್ಕಿವ್:ಆರನೇ ದಿನವೂ ರಷ್ಯಾ, ಉಕ್ರೇನ್ ಮೇಲೆ ದಾಳಿ ಮುಂದುವರಿಸಿರುವ ಪರಿಣಾಮವಾಗಿ, ವಸತಿ ಪ್ರದೇಶಗಳು ಮತ್ತು ಪ್ರಾದೇಶಿಕ ಆಡಳಿತದ ಕಟ್ಟಡ ಸೇರಿದಂತೆ ಉಕ್ರೇನ್‌ನ ಎರಡನೇ ಅತಿದೊಡ್ಡ ನಗರದ ಮಧ್ಯಭಾಗದಲ್ಲಿ ಕ್ಷಿಪಣಿ ದಾಳಿಗಳು ನಡೆಯುತ್ತಿವೆ ಎಂದು ಹಾರ್ಕಿವ್ ಪ್ರದೇಶದ ಮುಖ್ಯಸ್ಥ ಒಲೆಗ್ ಸಿನೆಗುಬೊವ್ ಮಂಗಳವಾರ ಹೇಳಿದ್ದಾರೆ.

ಹಾರ್ಕಿವ್‌ನಲ್ಲಿ ಗ್ರ್ಯಾಡ್‌ (ಸಾಮೂಹಿಕ ರಾಕೆಟ್‌ ದಾಳಿ) ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ. ಹೀಗಿದ್ದರೂ ನಗರವು ನಮ್ಮ ವಶದಲ್ಲಿಯೇ ಇದೆ. 'ಇಂತಹ ದಾಳಿಗಳು ಉಕ್ರೇನ್‌ ಜನರ ನರಮೇಧ ಮತ್ತು ನಾಗರಿಕ ಜನಸಂಖ್ಯೆಯ ವಿರುದ್ಧದ ಯುದ್ಧ ಅಪರಾಧ!' ಎಂದು ಅವರು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಹಾರ್ಕಿವ್ ನಗರದ ಪ್ರಾದೇಶಿಕ ಕಟ್ಟಡಕ್ಕೆ ರಷ್ಯಾದ ಕ್ಷಿಪಣಿ ಅಪ್ಪಳಿಸಿ ಸ್ಫೋಟಗೊಂಡಿರುವುದನ್ನು ಕಾಣಬಹುದಾಗಿದೆ. ಇದರಿಂದ ಆಗಿರುವ ಸಾವು-ನೋವುಗಳ ಬಗ್ಗೆ ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಸಿನೆಗುಬೊವ್ ತಿಳಿಸಿದ್ದಾರೆ.

ADVERTISEMENT

ಫೆ.24 ರಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಗೆ ಕರೆ ನೀಡಿದ್ದು, ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ದಾಳಿಯಲ್ಲಿ ಮಕ್ಕಳು ಸೇರಿದಂತೆ ಹಲವಾರು ನಾಗರಿಕರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಈ ಕ್ರಮವನ್ನು ಅಮೆರಿಕ, ಬ್ರಿಟನ್, ಯುರೋಪ್ ಒಕ್ಕೂಟ ಸೇರಿದಂತೆ ಹಲವು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ರಷ್ಯಾ ಕೂಡಲೇ ದಾಳಿ ನಿಲ್ಲಿಸುವಂತೆ ಆಗ್ರಹಿಸಿ ಅನೇಕ ದೇಶಗಳಲ್ಲಿ ಪ್ರತಿಭಟನೆಗಳನ್ನು ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.