ಸಲ್ಮಾನ್ ಖಾನ್
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನ ಮತ್ತು ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರಗಳು ಎನ್ನುವ ರೀತಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
ಈ ಹೇಳಿಕೆಗೆ ತಿರುಗಿಬಿದ್ದಿರುವ ಪಾಕಿಸ್ತಾನ, ಸಲ್ಮಾನ್ ಖಾನ್ ಹೆಸರನ್ನು ಭಯೋತ್ಪಾದಕ ವಿರೋಧಿ ಕಾಯ್ದೆಯ (1997) 4ನೇ ಶೆಡ್ಯೂಲ್‌ಗೆ ಸೇರಿಸಿದೆ. ಈ ಪಟ್ಟಿಯನ್ನು ಸಾಮಾನ್ಯವಾಗಿ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ವ್ಯಕ್ತಿಗಳಿಗೆ ಕಾಯ್ದಿರಿಸಲಾಗಿದೆ. ಈ ಪಟ್ಟಿಗೆ ಸಲ್ಮಾನ್ ಖಾನ್ ಅವರ ಹೆಸರು ಸೇರಿಸಿರುವ ಪಾಕಿಸ್ತಾನ, ಅವರನ್ನು ‘ಉಗ್ರ’ ಎಂದು ಕರೆದಿದೆ.
ಡಿಡಿ ನ್ಯೂಸ್ ವರದಿ ಪ್ರಕಾರ, ರಿಯಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಲ್ಮಾನ್ ಖಾನ್ ಪಾಕಿಸ್ತಾನ ಮತ್ತು ಬಲೂಚಿಸ್ತಾನವನ್ನು ಪ್ರತ್ಯೇಕ ರಾಷ್ಟ್ರವಾಗಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿರುವ ಪಾಕಿಸ್ತಾನ ಅವರನ್ನು ‘ಉಗ್ರ’ ಎಂದು ಹೆಸರಿಸಿದೆ.
ಸಲ್ಮಾನ್ ಖಾನ್ ಹೇಳಿದ್ದೇನು?
ಮನಿ ಕಂಟ್ರೂಲ್ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಶಾರುಕ್ ಖಾನ್, ಅಮೀರ್ ಖಾನ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇಲ್ಲಿ ಮಾತನಾಡುವಾಗ ಸಲ್ಮಾನ್ ಅವರು, ‘ಹಿಂದಿ ಸಿನಿಮಾವನ್ನು ನಿರ್ಮಿಸಿ ಸೌದಿ ಅರೇಬಿಯಾದಲ್ಲಿ ಬಿಡುಗಡೆ ಮಾಡಿದರೆ ಸೂಪರ್ ಹಿಟ್ ಆಗುತ್ತದೆ. ಅಲ್ಲದೆ ತಮಿಳು, ತೆಲುಗು ಅಥವಾ ಮಲಯಾಳಂನಲ್ಲಿ ಸಿನಿಮಾ ಮಾಡಿದರೂ ಅದು ನೂರಾರು ಕೋಟಿ ಹಣ ಗಳಿಸಲಿದೆ. ಏಕೆಂದರೆ ಬೇರೆ ಬೇರೆ ರಾಷ್ಟ್ರಗಳ ಜನರು ಇಲ್ಲಿ ನೆಲೆಸಿದ್ದಾರೆ. ಉದಾಹರಣೆಗೆ ಬಲೂಚಿಸ್ತಾನ, ಅಫ್ಗಾನಿಸ್ತಾನ, ಪಾಕಿಸ್ತಾನದ ಜನರು ಇಲ್ಲಿ ವಾಸಿಸುತ್ತಿದ್ದಾರೆ, ಎಲ್ಲರೂ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದರು. ಈ ಹೇಳಿಕೆಯಲ್ಲಿ ಬಲೂಚಿಸ್ತಾನ ಮತ್ತು ಪಾಕಿಸ್ತಾನವನ್ನು ಪ್ರತ್ಯೇಕ ರಾಷ್ಟ್ರದಂತೆ ಉಲ್ಲೇಖಿಸಿ ಹೇಳಿದ್ದಾರೆ ಎಂದು ಪಾಕಿಸ್ತಾನ ಕಿಡಿಕಾರಿದ್ದು, ಉಗ್ರ ಎಂದು ಕರೆದಿರುವುದಾಗಿ ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.