
ದುಬೈ: ಯೆಮನ್‌ನಲ್ಲಿರುವ ಬಂಡುಕೋರರ ಗುಂಪಿಗೆ ಯುಎಇ ಶಸ್ತ್ರಾಸ್ತ್ರ ಪೂರೈಸಿದೆ ಎಂದು ಆರೋಪಿಸಿ ಸೌದಿ ಅರೇಬಿಯಾವು ಮಂಗಳವಾರ ಬಂದರು ನಗರ ಮುಕಾಲಾ ಮೇಲೆ ವಾಯು ದಾಳಿ ನಡೆಸಿದೆ.
ಯುಎಇಯ ನಡೆ ‘ಅತ್ಯಂತ ಅಪಾಯಕಾರಿ’ ಎಂದು ಸೌದಿ ಬಣ್ಣಿಸಿದೆ. ಆದರೆ, ಬಂಡುಕೋರರ ಗುಂಪಿಗೆ ಶಸ್ತ್ರಾಸ್ತ್ರ ಪೂರೈಸಿದ ಆರೋಪವನ್ನು ಯುಎಇ ಅಲ್ಲಗಳೆದಿದೆ. ವೈಮಾನಿಕ ದಾಳಿಯ ಬೆನ್ನಲ್ಲೇ ಯೆಮನ್‌ನ ಸೌದಿ ಬೆಂಬಲಿತ ಸರ್ಕಾರ, ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಯುಎಇ ಬೆಂಬಲಿತ ಸದರ್ನ್ ಟ್ರಾನ್ಸಿಷನಲ್ ಕೌನ್ಸಿಲ್ (ಎಸ್‌ಟಿಸಿ) ಹೆಸರಿನ ಬಂಡುಕೋರರ ಗುಂಪು ಈಚೆಗೆ ಯೆಮನ್‌ನ ಬಂದರು ನಗರ ಮುಕಾಲಾ ಸೇರಿದಂತೆ ಕೆಲವು ಪ್ರದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಇದು ಸೌದಿ ಅರೇಬಿಯಾದ ಕೆಂಗಣ್ಣಿಗೆ ಕಾರಣವಾಗಿದೆ.
ತಾನು ವಶಪಡಿಸಿಕೊಂಡಿರುವ ಪ್ರದೇಶದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಎಸ್‌ಟಿಸಿ ಹೇಳಿದೆ. ‘ಹಿಂದಕ್ಕೆ ಸರಿಯುವ ಯಾವುದೇ ಚಿಂತನೆ ಇಲ್ಲ. ಭೂಮಾಲೀಕನಿಗೆ ತನ್ನ ಸ್ವಂತ ಭೂಮಿಯನ್ನು ಬಿಡುವಂತೆ ಹೇಳುವುದನ್ನು ಒಪ್ಪಲಾಗದು’ ಎಂದು ಎಸ್‌ಟಿಸಿ ವಕ್ತಾರ ಅನ್ವರ್ ಅಲ್ ತಮೀಮಿ ಹೇಳಿದ್ದಾರೆ.
ಈ ಬೆಳವಣಿಗೆಯು ಸೌದಿ ಅರೇಬಿಯಾ ಮತ್ತು ಯುಎಇ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆಯಲ್ಲದೆ, ದಶಕಗಳಿಂದಲೂ ಯುದ್ಧದಿಂದ ಜರ್ಜರಿತವಾಗಿರುವ ಯೆಮನ್‌ನಲ್ಲಿ ಹೊಸ ಸಂಘರ್ಷದ ಭೀತಿ ಮೂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.