ಮರಣ ದಂಡನೆ (ಪ್ರಾತಿನಿಧಿಕ ಚಿತ್ರ)
ಮೀರತ್: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಮೀರತ್ ಮೂಲದ ವ್ಯಕ್ತಿಯೊಬ್ಬರಿಗೆ ಸೌದಿ ಅರೇಬಿಯಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ.
ಜೈದ್ ಜುನೈದ್ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಸೌದಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ನ್ಯಾಯಾಲಯದ ತೀರ್ಪಿನ ಕುರಿತು ಜಿಲ್ಲಾಧಿಕಾರಿಗಳ ಕಚೇರಿಗೆ ಪತ್ರ ಬಂದಿರುವ ಬಗ್ಗೆ ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ತಾಡಾ ತಿಳಿಸಿದ್ದಾರೆ.
‘ಮುಂಡಲಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಚೌತ್ ಗ್ರಾಮದ ಜೈದ್ ಜುನೈದ್ ಅವರಿಗೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಮೆಕ್ಕಾ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿದೆ. ಅವರ ಕುಟುಂಬಕ್ಕೆ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವಿದೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪತ್ರವನ್ನು ಜೈದ್ ಅವರ ಮನೆಯ ಕುಟುಂಬಕ್ಕೆ ತಲುಪಿಸಲಾಗಿದೆ’ ಎಂದು ವಿಪಿನ್ ಅವರು ಮಾಹಿತಿ ನೀಡಿದ್ದಾರೆ.
‘ಜೈದ್, ಅಲ್–ಜಫರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ ಅವರ ಕಾರು ಕಳುವಾಗಿತ್ತು. ಮೂರು ದಿನಗಳ ಬಳಿಕ ಸೌದಿ ಪೊಲೀಸರು ಕಾರನ್ನು ಹುಡುಕಿಕೊಟ್ಟಿದ್ದರು. ಕಾರು ಅಪಘಾತವಾದ ಸ್ಥಿತಿಯಲ್ಲಿ ಸಿಕ್ಕಿತ್ತು. ಹೀಗಾಗಿ ಜೈದ್ ಕೆಲಸ ಮಾಡುತ್ತಿದ್ದ ಕಂಪನಿ ನಷ್ಟ ಭರಿಸುವಂತೆ ಅವರ ಮೇಲೆ ಪ್ರಕರಣ ದಾಖಲಿಸಿತ್ತು. ಆ ಹಣವನ್ನು ಭರಿಸಲು ಸೌದಿ ಪೊಲೀಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿ ಜೈದ್ ಕೆಲಸಕ್ಕೆ ಸೇರಿಕೊಂಡಿದ್ದರು. ಮೂರು ತಿಂಗಳು ಕಳೆದ ಮೇಲೆ ಜೈದ್ ಬಳಿ 700 ಗ್ರಾಂ ಮಾದಕ ದ್ರವ್ಯ ದೊರಕಿದೆ ಎಂದು ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ ದಾಖಲಿಸಲಾಗಿತ್ತು. 2023ರ ಜನವರಿ 15 ರಂದು ಜೈದ್ ಬಂಧನವಾಗಿತ್ತು. ಅವರನ್ನು ಜೆಡ್ಡಾ ಸೆಂಟ್ರಲ್ ಜೈಲ್‌ನಲ್ಲಿ ಇರಿಸಲಾಗಿತ್ತು’ ಎಂದು ಕುಟುಂಬ ಮಾಹಿತಿ ನೀಡಿದೆ.
‘ಜೈದ್ ನಿರಪರಾಧಿ. ಅವರು ಅವರ ಕೆಲಸ ಮಾಡುತ್ತಿದ್ದರು ಅಷ್ಟೆ. ಭಾರತ ಸರ್ಕಾರ ಮಧ್ಯಪ್ರವೇಶಿಸಿ ಅವರನ್ನು ಪಾರುಮಾಡಬೇಕು’ ಎಂದು ಜೈದ್ ಸಹೋದರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.