ADVERTISEMENT

ಜಮಾಲ್‌ ಖಶೋಗ್ಗಿ ಹತ್ಯೆಗೆ ಒಪ್ಪಿಗೆ ನೀಡಿದ್ದ ಸೌದಿ ರಾಜಕುಮಾರ: ಗುಪ್ತಚರ ವರದಿ

ಅಮೆರಿಕದ ಗುಪ್ತಚರ ಸಂಸ್ಥೆ ವರದಿಯಲ್ಲಿ ಉಲ್ಲೇಖ

ಪಿಟಿಐ
Published 27 ಫೆಬ್ರುವರಿ 2021, 5:47 IST
Last Updated 27 ಫೆಬ್ರುವರಿ 2021, 5:47 IST
ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌
ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌    

ವಾಷಿಂಗ್ಟನ್‌: ವಾಷಿಂಗ್ಟನ್‌ ಪೋಸ್ಟ್‌ನ ಅಂಕಣಕಾರ ಜಮಾಲ್‌ ಖಶೋಗ್ಗಿಯನ್ನು ಸೆರೆ ಹಿಡಿಯಲು ಇಲ್ಲವೇ ಹತ್ಯೆ ಮಾಡಲು ಸೌದಿ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಒಪ್ಪಿಗೆ ನೀಡಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ನ್ಯಾಷನಲ್‌ ಇಂಟೆಲಿಜೆನ್ಸ್‌ ನಿರ್ದೇಶಕರ ಕಚೇರಿ (ಒಡಿಎನ್‌ಐ)ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಸಂಸತ್‌ಗೆ ಸಲ್ಲಿಸಿದೆ.

ಸೌದಿ ರಾಜಕುಮಾರನ ನೀತಿಗಳನ್ನು ಖಶೋಗ್ಗಿ ತಮ್ಮ ಅಂಕಣದಲ್ಲಿ ಟೀಕಿಸುತ್ತಿದ್ದರು. 55 ವರ್ಷದ ಖಶೋಗ್ಗಿ ಅವರನ್ನು ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್‌ನಲ್ಲಿ 2018ರ ಅಕ್ಟೋಬರ್‌ 2ರಂದು ಹತ್ಯೆ ಮಾಡಲಾಗಿತ್ತು.

ADVERTISEMENT

‘ಖಶೋಗ್ಗಿಯನ್ನು ಹತ್ಯೆ ಮಾಡುವಲ್ಲಿ ವಿಫಲರಾದರೆ ರಾಜಕುಮಾರ ತಮ್ಮನ್ನು ಬಂಧಿಸಬಹುದು ಇಲ್ಲವೇ ತಮಗೆ ಗುಂಡಿಕ್ಕಬಹುದು ಎಂಬ ಅಳಕು ಹತ್ಯೆಕೋರರಲ್ಲಿ ಮನೆ ಮಾಡಿತ್ತು. ಇಂಥ ಭೀತಿಯ ವಾತಾವರಣವನ್ನು ರಾಜಕುಮಾರ ಸೃಷ್ಟಿಸಿದ್ದ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ರಾಜಕುಮಾರನ ಅನುಮತಿ ಇಲ್ಲದೆಯೇ ಇಂಥ ಕೃತ್ಯಕ್ಕೆ ಕೈಹಾಕಲು ಸಾಧ್ಯವೇ ಇಲ್ಲ. ಈ ಬಗ್ಗೆ ರಾಜಕುಮಾರನ ಆದೇಶವನ್ನು ಪ್ರಶ್ನಿಸುವ ಧೈರ್ಯವೂ ಹತ್ಯೆಕೋರರಲ್ಲಿ ಇದ್ದಿರಲಿಲ್ಲ’ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಖಶೋಗ್ಗಿ ಹತ್ಯೆ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಂಡುಬಂದ ಭಿನ್ನದನಿಯನ್ನು ಉಡುಗಿಸಲು ಕೆಲವರು ಪ್ರಯತ್ನಿಸಿದರು. ಇಂಥ ಕೃತ್ಯದಲ್ಲಿ ತೊಡಗಿದ್ದ ಆರೋಪದ ಮೇಲೆ ಸೌದಿ ಅರೇಬಿಯಾದ 76 ಜನರ ವೀಸಾದ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್‌ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.