ಕಠ್ಮಂಡು: ದೇಶದಲ್ಲಿ ಆರ್ಥಿಕ ಸ್ಥಿರತೆ ಮರುಸ್ಥಾಪನೆ ಹಾಗೂ ಉದ್ಯೋಗ ಸೃಷ್ಟಿಯ ಭರವಸೆಯೊಂದಿಗೆ ಕಳೆದ ವರ್ಷ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಕೆ.ಪಿ.ಶರ್ಮಾ ಓಲಿ ಅವರು, ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ ನಿಷೇಧ ಖಂಡಿಸಿ ಭುಗಿಲೆದ್ದ ಆಕ್ರೋಶಕ್ಕೆ ಗುರಿಯಾಗಿ, ಮಂಗಳವಾರ ಹಠಾತ್ ರಾಜೀನಾಮೆ ನೀಡಿದ್ದಾರೆ.
ದೇಶದಲ್ಲಿನ ಬಡತನ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಓಲಿ ಶಪಥ ಮಾಡಿದ್ದರು. ಆದರೆ, ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ ಮತ್ತು ಭ್ರಷ್ಟಾಚಾರ ನಿಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಆರೋಪಗಳಿಗೆ ಓಲಿ ಗುರಿಯಾಗಿ, ಈಗ ಅಧಿಕಾರ ಕಳೆದುಕೊಂಡಿದ್ದಾರೆ.
ಕೆ.ಪಿ.ಶರ್ಮಾ ಓಲಿ ಈ ಹಿಂದೆ ಮೂರುಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಓಲಿ ಅವರು ಚೀನಾಕ್ಕೆ ಹತ್ತಿರವಾಗಿದ್ದಾರೆ ಎಂದು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಆದರೆ, ಇದನ್ನು ಅವರು ಅಲ್ಲಗಳೆಯುತ್ತಿದ್ದರು.
‘ನನ್ನ ಆಡಳಿತ ಯಾವಾಗಲೂ ತಟಸ್ಥ ಮತ್ತು ಅಲಿಪ್ತ ನೀತಿ ಅನುಸರಿಸುತ್ತದೆ’ ಎಂದು ಅವರು 2022ರಲ್ಲಿ ರಾಯಿಟರ್ಸ್‌ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ಕಳೆದ ವರ್ಷ ಚುನಾವಣೆ ನಂತರ, ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ, ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ–ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ (ಸಿಪಿಎನ್–ಯುಎಂಎಲ್) ನೇತೃತ್ವದ ಸರ್ಕಾರ ರಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.
ನೇಪಾಳ ರಾಜಕೀಯದಲ್ಲಿ ‘ಕೆಪಿ’ ಎಂದೇ ಖ್ಯಾತರಾಗಿರುವ 73 ವರ್ಷದ ಖಡ್ಗ ಪ್ರಸಾದ ಶರ್ಮಾ ಓಲಿ, ನೇರ ಮಾತಿಗೂ ಹೆಸರಾದವರು. ಸಿಪಿಎನ್–ಯುಎಂಎಲ್ ಪಕ್ಷದ ಸರ್ವೋಚ್ಚ ನಾಯಕರಾಗಿ ಹೊರಹೊಮ್ಮಿದ್ದಾರೆ.
‘ಸಿಪಿಎನ್–ಯುಎಂಎಲ್ ಎಂಬುದು ಓಲಿ ಅವರ ಪಕ್ಷ ಎಂದೇ ಪರಿಗಣಿಸುವಷ್ಟರ ಮಟ್ಟಿಗೆ ಅವರು ಪಕ್ಷವನ್ನು ಕಟ್ಟಿ, ಬೆಳೆಸಿದ್ದಾರೆ’ ಎಂದು ರಾಜಕೀಯ ಪತ್ರಕರ್ತ ಬಿನು ಸುವೇದಿ ಹೇಳುತ್ತಾರೆ.
‘ತಮ್ಮ ಮಾತೇ ಅಂತಿಮ ಎಂಬುದು ಓಲಿ ಅವರ ನಿಲುವಾಗಿತ್ತು. ಇತರರು ನೀಡುವ ಸಲಹೆಗಳನ್ನು, ಟೀಕೆಗಳನ್ನು ಓಲಿ ಸ್ವೀಕರಿಸುತ್ತಿದ್ದು ಅಪರೂಪ. ಸ್ವತಃ ಪಕ್ಷದ ಮುಖಂಡರು ನೀಡುತ್ತಿದ್ದ ಸಲಹೆಗಳನ್ನು ಸಹ ಸ್ವೀಕರಿಸುತ್ತಿರಲಿಲ್ಲ’ ಎಂದು ಸುವೇದಿ ಹೇಳಿದರು.
ಅವರ ರಾಜಕೀಯ ಜೀವನಕ್ಕೆ ಹಲವು ದಶಕಗಳ ಹೋರಾಟದ ಹಿನ್ನೆಲೆ ಇದೆ. ದೇಶದಲ್ಲಿನ ಅರಸೊತ್ತಿಗೆಯನ್ನು ಕಿತ್ತೊಗೆಯಲು 1973ರಲ್ಲಿ ಆಂದೋಲನ ಮುನ್ನಡೆಸುತ್ತಿದ್ದ ವೇಳೆ ಅವರನ್ನು ಬಂಧಿಸಲಾಯಿತು. ಆಗ ಅವರಿಗೆ 21 ವರ್ಷ.
‘ನನಗೆ ಕಠಿಣವಾದ ಜೈಲುಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ನಾಲ್ಕು ವರ್ಷ ಒಬ್ಬನನ್ನೇ ಸೆರೆಮನೆಯ ಕೊಠಡಿಯೊಂದರಲ್ಲಿ ಕೂಡಿಹಾಕಲಾಗಿತ್ತು’ ಎಂದು ಅವರ ಆಯ್ದ ಭಾಷಣಗಳ ಕೃತಿಯಲ್ಲಿ ಉಲ್ಲೇಖವಿದೆ.
‘ಸರ್ವಾಧಿಕಾರ ಆಡಳಿತ ವಿರುದ್ಧ ಹೋರಾಟ ನಡೆಸಿದ್ದೇ ನಾನು ಮಾಡಿದ ಅಪರಾಧ’ ಎಂದೂ ಅವರು ಬರೆದುಕೊಂಡಿದ್ದಾರೆ.
1987ರಲ್ಲಿ ಸೆರೆವಾಸದಿಂದ ಬಿಡುಗಡೆಗೊಂಡ ನಂತರ ಅವರು ಸಿಪಿಎಂ–ಯುಎಂಎಲ್ ಸೇರಿದರು. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು, ಮೊದಲ ಬಾರಿಗೆ 2015ರಲ್ಲಿ ಪ್ರಧಾನಿಯಾದರು. 2018ರಲ್ಲಿ ಮತ್ತೆ ಪ್ರಧಾನಿಯಾಗಿ ಚುನಾಯಿತರಾದರು. ರಾಜಕೀಯ ಅಸ್ಥಿರತೆ ಪರಿಣಾಮ 2021ರಲ್ಲಿ ಅವರನ್ನು ಪ್ರಧಾನಿಯಾಗಿ ಪುನಃ ನೇಮಕ ಮಾಡಲಾಗಿತ್ತು.
ಕಷ್ಟದ ಹಾದಿ...
1952ರಲ್ಲಿ ಜನಿಸಿರುವ ಓಲಿ ಅವರು ಬಾಲ್ಯದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದವರು. ಅವರು ನಾಲ್ಕು ವರ್ಷದವರಿದ್ಧಾಗ ಅವರ ತಾಯಿ ಸಿಡುಬು ರೋಗದಿಂದ ಮೃತಪಟ್ಟಿದ್ದರು. ನಂತರದ ದಿನಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದಾಗಿ ಕುಟುಂಬವೇ ಚದುರಿ ಹೋಗಿತ್ತು. ಓಲಿ ಅವರು ತಮ್ಮ ಅಜ್ಜ–ಅಜ್ಜಿ ಅವರ ಆಶ್ರಯದಲ್ಲಿ ಬೆಳೆದರು.
ಓಲಿ ನೇತೃತ್ವದ ಸರ್ಕಾರ ಹಾಗೂ ದೇಶದ ರಾಜಕೀಯ ನೇತೃತ್ವದ ಬಗ್ಗೆ ಜನರಲ್ಲಿ ವ್ಯಾಪಕ ಅಸಮಾಧಾನ ಇತ್ತು. ಇದು ನಿನ್ನೆ ಸ್ಫೋಟಗೊಂಡಿದೆ.ಬಿಪಿನ್ ಅಧಿಕಾರಿ, ಸಂವಿಧಾನ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.