ಸ್ಫೋಟ
(ಐಸ್ಟೋಕ್ ಚಿತ್ರ)
ಪೆಶಾವರ: ವಾಯವ್ಯ ಪಾಕಿಸ್ತಾನದ ಖೈಬರ್ ಪಂಖ್ತುಖ್ವಾ ಪ್ರಾಂತ್ಯದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಿಸಿ ಹಿರಿಯ ಧಾರ್ಮಿಕ ಮುಖಂಡ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ವಜೀರಿಸ್ತಾನದ ಮೌಲಾನಾ ಅಬ್ದುಲ್ ಅಜೀಜ್ ಮಸೀದಿಯಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆಯುಐ) ಜಿಲ್ಲಾ ಮುಖ್ಯಸ್ಥ ಮೌಲಾನಾ ಅಬ್ದುಲ್ಲಾ ನದೀಮ್ ಸೇರಿದಂತೆ ಇತರರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಆಸಿಫ್ ಬಹಾದರ್ ಹೇಳಿದ್ದಾರೆ.
ಮಸೀದಿಯ ಪ್ರವಚನಪೀಠದಲ್ಲಿ ಸ್ಫೋಟಕ ಇಡಲಾಗಿತ್ತು ಅಧಿಕಾರಿ ತಿಳಿಸಿದ್ದಾರೆ.
ರಕ್ಷಣಾ ತಂಡವು ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ವಾನಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಕೂಡ ಸ್ಥಳಕ್ಕೆ ತಲುಪಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಮಸೀದಿಗಳನ್ನು ಗುರಿಯಾಗಿಸಿಕೊಂಡು ಈ ಹಿಂದೆಯೂ ಪ್ರಾಂತ್ಯದಲ್ಲಿ ಬಾಂಬ್ ಸ್ಫೋಟ ನಡೆಸಲಾಗಿತ್ತು.
ಕಳೆದ ತಿಂಗಳು, ಪ್ರಾಂತ್ಯದ ದಾರುಲ್ ಉಲೂಮ್ ಹಕ್ಕಾನಿಯಾ ಸೆಮಿನರಿಯಲ್ಲಿ ಆತ್ಮಹುತಿ ಬಾಂಬ್ ದಾಳಿ ನಡೆದು ಜೆಯುಐ-ಎಸ್ ನಾಯಕ ಮೌಲಾನಾ ಹಮೀದುಲ್ ಹಕ್ ಹಕ್ಕಾನಿ ಸೇರಿದಂತೆ ಆರು ಮಂದಿ ಮೃತಪಟ್ಟು 15 ಜನರು ಗಾಯಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.