ADVERTISEMENT

ಹಾದಿ ಹತ್ಯೆಗೆ ನ್ಯಾಯ ಸಿಗದಿದ್ದರೆ ಪ್ರತೀಕಾರ: ಇಂಕ್ವಿಲಾಬ್ ಮಂಚ್

ಪಿಟಿಐ
Published 7 ಜನವರಿ 2026, 14:20 IST
Last Updated 7 ಜನವರಿ 2026, 14:20 IST
ಶರೀಫ್ ಉಸ್ಮಾನ್ ಹಾದಿ
ಶರೀಫ್ ಉಸ್ಮಾನ್ ಹಾದಿ   

ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಅವರ ಪಕ್ಷ ಇಂಕ್ವಿಲಾಬ್ ಮಂಚ್ ತಿರಸ್ಕರಿಸಿದ್ದು, ಹತ್ಯೆಯಲ್ಲಿ ಸರ್ಕಾರಿ ವ್ಯವಸ್ಥೆ ಕೂಡ ಭಾಗಿಯಾಗಿದೆ ಎಂದು ಆರೋಪಿಸಿದೆ. ಪ್ರಕರಣದಲ್ಲಿ ನ್ಯಾಯ ಸಿಗದಿದ್ದರೆ, ಹಾದಿಯ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ.

‘ಒಬ್ಬ ವಾರ್ಡ್‌ ಕೌನ್ಸಿಲರ್ ನಿರ್ದೇಶನದಂತೆ ಹಾದಿ ಕೊಲೆ ನಡೆದಿದೆ ಎಂಬ ಆರೋಪಗಳನ್ನು ಮತಿಭ್ರಮಣೆ ಇರುವವನು ಕೂಡ ನಂಬಲಾರ. ಇಡೀ ಅಪರಾಧಿಗಳ ಗುಂಪು ಮತ್ತು ಸರ್ಕಾರಿ ವ್ಯವಸ್ಥೆಯು ಹತ್ಯೆಯಲ್ಲಿ ಭಾಗಿಯಾಗಿವೆ. ಅವರನ್ನು ಕಾನೂನಿನ ಎದುರು ಹಾಜರುಪಡಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ. ಅವರ ಹೆಸರನ್ನು ಒಳಗೊಳ್ಳದ ಯಾವುದೇ ಆರೋಪಪಟ್ಟಿ ನಮಗೆ ಸ್ವೀಕಾರ್ಹವಲ್ಲ’ ಎಂದು ಇಂಕ್ವಿಲಾಬ್ ಮಂಚ್‌ನ ಕಾರ್ಯದರ್ಶಿ ಅಬ್ದುಲ್ಲಾ ಅಲ್ ಜಾಬಿರ್ ಹೇಳಿದ್ದಾರೆ.

ಹಾದಿ ಹತ್ಯೆಗೆ ಸಂಬಂಧಿಸಿ ಢಾಕಾ ಮೆಟ್ರೋಪಾಲಿಟನ್ ಪೊಲೀಸರ (ಡಿಎಂಪಿ) ಪತ್ತೇದಾರಿ ವಿಭಾಗವು ಮಂಗಳವಾರ ಪ್ರಮುಖ ಆರೋಪಿ ಫೈಸಲ್ ಕರೀಮ್ ಮಸೂದ್ ಸೇರಿದಂತೆ 17 ಜನರ ವಿರುದ್ಧ ಆರೋಪಗಳನ್ನು ಹೊರಿಸಿದೆ. ಅವಾಮಿ ಲೀಗ್‌ನ ನಾಮನಿರ್ದೇಶಿತ ವಾರ್ಡ್ ಕೌನ್ಸಿಲರ್ ತೈಜುಲ್ ಇಸ್ಲಾಂ ಚೌಧರಿ ಬಪ್ಪಿ ಅವರ ನಿರ್ದೇಶನದ ಮೇರೆಗೆ ರಾಜಕೀಯ ಸೇಡಿನ ಕಾರಣಕ್ಕಾಗಿ ಹಾದಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅದು ಹೇಳಿದೆ.

ADVERTISEMENT

ಶೇಖ್ ಹಸೀನಾ ನೇತೃತ್ವದ ಸರ್ಕಾರದ ಪತನಕ್ಕೆ ಕಾರಣವಾದ ದಂಗೆಯ ವೇಳೆ ಮುಂಚೂಣಿಗೆ ಬಂದಿದ್ದ ಹಾದಿ ಅವರ ಮೇಲೆ ಡಿಸೆಂಬರ್ 12ರಂದು ಢಾಕಾದಲ್ಲಿ ಚುನಾವಣಾ ಪ್ರಚಾರ ನಡೆದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯಲಾಗಿತ್ತಾದರೂ, ಡಿಸೆಂಬರ್ 18ರಂದು ಅವರು ನಿಧನರಾದರು.

ಅವರ ಹತ್ಯೆಯಲ್ಲಿ ಭಾರತದ ನಂಟಿದೆ ಮತ್ತು ಅವರ ಹಂತಕರು ಮೇಘಾಲಯದ ಮೂಲಕ ಭಾರತದ ಗಡಿ ದಾಟಿದ್ದಾರೆ ಎಂದು ಬಾಂಗ್ಲಾದೇಶ ಆರೋಪಿಸಿದೆ. ಈ ಆರೋಪವನ್ನು ಭಾರತೀಯ ಅಧಿಕಾರಿಗಳು ತಳ್ಳಿಹಾಕಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ತಿಳಿಸಿದ್ದಾರೆ. ಫೆಬ್ರುವರಿ 12ರಂದು ನಡೆಯಲಿರುವ ಚುನಾವಣೆಗೆ ಹಾದಿ ಸಂಸದೀಯ ಅಭ್ಯರ್ಥಿಯೂ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.