
ಢಾಕಾ: ‘ಇನ್‌ಕ್ವಿಲಾಬ್ ಮಂಚ್’ ಸಂಘಟನೆಯ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆ ಪ್ರಕರಣದ ಇಬ್ಬರು ಪ್ರಮುಖ ಶಂಕಿತರು ಬಾಂಗ್ಲಾದೇಶದಿಂದ ಪರಾರಿಯಾಗಿದ್ದಾರೆ. ಈ ಇಬ್ಬರು ಪ್ರಸಕ್ತ ಭಾರತದಲ್ಲಿ ಇರುವ ಶಂಕೆ ಇದೆ ಎಂದು ಢಾಕಾ ಮೆಟ್ರೊಪಾಲಿಟನ್ ಪೊಲೀಸ್ (ಡಿಎಂಪಿ) ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಡಿಸೆಂಬರ್ 12ರಂದು ಢಾಕಾದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ಹಾದಿ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸಿಂಗಾಪುರಕ್ಕೆ ಕಳುಹಿಸಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಡಿಸೆಂಬರ್ 18ರಂದು ಹಾದಿ ಮೃತಪಟ್ಟಿದ್ದರು.
ಇದೀಗ, ಪ್ರಕರಣದ ಪ್ರಮುಖ ಶಂಕಿತರಾದ ಫೈಸಲ್ ಕರೀಂ ಮಸೂದ್ ಹಾಗೂ ಆಲಂಗೀರ್ ಶೇಖ್ ಪರಾರಿಯಾಗಿರುವ ಬಗ್ಗೆ ಡಿಎಂಪಿ ಎಸ್.ಎನ್.ಮೊಹಮ್ಮದ್ ನಜ್ರುಲ್ ಇಸ್ಲಾಮ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
‘ಫೈಸಲ್ ಮತ್ತು ಆಲಂಗೀರ್ ಸ್ಥಳೀಯ ಸಹಚರರ ಸಹಾಯ ಪಡೆದು ಹಲೂಅಘಾಟ್ ಗಡಿ ಮೂಲಕ ಭಾರತದ ಮೇಘಾಲಯ ರಾಜ್ಯ ಪ್ರವೇಶಿಸಿದ್ದಾರೆ. ಅಲ್ಲಿ, ಪೂರ್ತಿ ಎಂಬವರು ಅವರನ್ನು ಕರೆದೊಯ್ದಿದ್ದಾರೆ. ನಂತರ ಸಾಮಿ ಎಂಬ ಹೆಸರಿನ ಟ್ಯಾಕ್ಸಿ ಚಾಲಕ ಆರೋಪಿಗಳನ್ನು ಮೇಘಾಲಯದ ತುರಾ ನಗರಕ್ಕೆ ತಲುಪಿಸಿದ್ದಾನೆ ಎಂದು ತಿಳಿದುಬಂದಿದೆ’ ಎಂದಿದ್ದಾರೆ.
ಅಲ್ಲದೇ, ಶಂಕಿತರಿಗೆ ಸಹಾಯ ಮಾಡಿದ ಇಬ್ಬರೂ ವ್ಯಕ್ತಿಗಳನ್ನು ಭಾರತದ ಆಡಳಿತಾಧಿಕಾರಿಗಳು ಬಂಧಿಸಿದ್ದಾರೆ ಎಂದೂ ಮಾಹಿತಿ ದೊರೆತಿದೆ. ಶಂಕಿತರ ಬಂಧನ ಮತ್ತು ಹಸ್ತಾಂತರಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳ ಜತೆಗೆ ಬಾಂಗ್ಲಾ ಸರ್ಕಾರ ಮಾತುಕತೆ ನಡೆಸುತ್ತಿದೆ ಎಂದೂ ಮೊಹಮ್ಮದ್ ಅವರು ತಿಳಿಸಿದ್ದಾರೆ.
ಹಾದಿ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಚುರೂಪಿಸಿ ಈ ಹತ್ಯೆ ನಡೆಸಲಾಗಿದೆ ಎಂದೂ ಹೇಳಿದ್ದಾರೆ. ಶಂಕಿತರು ಯಾವಾಗ ಭಾರತಕ್ಕೆ ಪರಾರಿಯಾದರು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಬಾಂಗ್ಲಾದ ಈ ಆರೋಪವು ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
ಬಾಂಗ್ಲಾ ಹೇಳಿಕೆ ತಿರಸ್ಕರಿಸಿದ ಭಾರತ
ಶಿಲ್ಲಾಂಗ್: ಉಸ್ಮಾನ್ ಹಾದಿ ಹತ್ಯೆಯ ಶಂಕಿತರು ಮೇಘಾಲಯ ಪ್ರವೇಶಿಸಿದ್ದಾರೆ ಎಂಬ ಬಾಂಗ್ಲಾದೇಶದ ಹೇಳಿಕೆಯನ್ನು ಭಾರತದ ಭದ್ರತಾ ಸಂಸ್ಥೆಗಳು ಭಾನುವಾರ ತಿರಸ್ಕರಿಸಿವೆ. ಜತೆಗೆ ಈ ಹೇಳಿಕೆಯು ಹಾದಿತಪ್ಪಿಸುವಂತದ್ದು ಎಂದೂ ದೂರಿವೆ. ಬಿಎಸ್ಎಫ್ ಮೇಘಾಲಯ ಘಟಕದ ಮುಖ್ಯಸ್ಥರಾದ ಉಪಧ್ಯಾಯ ಅವರು ಈ ಬಗ್ಗೆ ಮಾತನಾಡಿ ‘ಹಲೂಅಘಾಟ್ ಮೂಲಕ ಯಾವುದೇ ವ್ಯಕ್ತಿಯು ಅಂತರರಾಷ್ಟ್ರೀಯ ಗಡಿ ದಾಟಿ ಮೇಘಾಲಯ ಪ್ರವೇಶಿಸಿರುವುದಕ್ಕೆ ಸಾಕ್ಷಿಗಳಿಲ್ಲ. ಅಂತಹ ಯಾವುದೇ ಘಟನೆಯೂ ಪತ್ತೆಯಾಗಿಲ್ಲ ಬಿಎಸ್‌ಎಫ್‌ಗೆ ಈ ಬಗ್ಗೆ ಮಾಹಿತಿಯೂ ಸಿಕ್ಕಿಲ್ಲ’ ಎಂದಿದ್ದಾರೆ. ಮೇಘಾಲಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರೂ ಪ್ರತಿಕ್ರಿಯಿಸಿ ಗರೋ ಹಿಲ್ಸ್ ಪ್ರದೇಶದಲ್ಲಿ ಶಂಕಿತರ ಉಪಸ್ಥಿತಿಯ ಬಗ್ಗೆ ಯಾವುದೇ ಗುಪ್ತಚರ ಮಾಹಿತಿಯೂ ಸಿಕ್ಕಿಲ್ಲ. ಸ್ಥಳೀಯ ಪೊಲೀಸರು ಕೂಡ ಯಾವುದೇ ಅನುಮಾನಸ್ಪದ ವ್ಯಕ್ತಿಗಳನ್ನು ಗುರುತಿಸಿಲ್ಲ ಎಂದಿದ್ದಾರೆ.
ಗಲಭೆಗೆ ಅವಕಾಶ ನೀಡಿದ ಸರ್ಕಾರ: ಆರೋಪ
ಶರೀಫ್ ಉಸ್ಮಾನ್ ಹಾದಿ ಹತ್ಯೆ ನಂತರ ಬಾಂಗ್ಲಾದೇಶದಲ್ಲಿ ಗಲಭೆ ನಡೆಯಲು ಮಧ್ಯಂತರ ಸರ್ಕಾರದ ಒಂದು ಗುಂಪು ಅವಕಾಶ ನೀಡಿದೆ ಎಂದು ಬಾಂಗ್ಲಾದ ಪತ್ರಿಕೆಗಳ ಸಂಪಾದಕರ ಮಂಡಳಿ ಆರೋಪಿಸಿದೆ. ‘ಹಾದಿ ಮೃತಪಟ್ಟ ದಿನ ಸಂಜೆ ಬಾಂಗ್ಲಾದ ಎರಡು ಪ್ರಮುಖ ಪತ್ರಿಕೆಗಳ ಕಚೇರಿಗೆ ಬೆಂಕಿ ಹೊತ್ತಿಸಲಾಗಿತ್ತು ಹಾಗೂ ಎರಡು ಪ್ರಗತಿಪರ ಸಾಂಸ್ಕೃತಿಕ ತಂಡಗಳನ್ನು ನಾಶಗೊಳಿಸಲಾಗಿತ್ತು. ದಾಳಿಕೋರರು ಈ ಗಲಭೆ ನಡೆಸುವ ಎರಡು ದಿನಗಳ ಮುಂಚೆಯೇ ಪತ್ರಿಕೆಗಳನ್ನು ನಾಶಪಡಿಸಲು ಕೆಲವರು ಕರೆ ನೀಡಿದ್ದರು. ದೇಶದ ಜನರಿಗೆ ಹಾಗೂ ಸರ್ಕಾರಕ್ಕೂ ಅವರು ಯಾರು ಎಂಬುದು ತಿಳಿದಿದೆ. ಆದರೂ ಸರ್ಕಾರ ಅವರನ್ನು ಬಂಧಿಸದೆ ಗಲಭೆಗೆ ಅವಕಾಶ ನೀಡಿದೆ’ ಎಂದು ಸಂಪಾದಕರ ಮಂಡಳಿಯ ಅಧ್ಯಕ್ಷ ನುರುಲ್ ಕಬೀರ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.