
ಶೇಖ್ ಹಸೀನಾ–ಪಿಟಿಐ ಚಿತ್ರ
ನವದೆಹಲಿ: ‘ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಅವರ ನೇತೃತ್ವದ ಸರ್ಕಾರವನ್ನು ದೇಶದ ಜನರು ಕಿತ್ತೊಗೆಯಬೇಕು. ಅವರು ಅಧಿಕಾರದಲ್ಲಿ ಇರುವವರೆಗೆ, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಸಾಧ್ಯವಿಲ್ಲ’ ಎಂದು ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೇಶದ ಜನರಿಗೆ ಕರೆ ನೀಡಿದ್ದಾರೆ.
17 ತಿಂಗಳ ಹಿಂದೆ ಢಾಕಾದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕರೆ ನೀಡಿದ್ದಾರೆ.
‘ಕಳೆದ ವರ್ಷ ದೇಶದಲ್ಲಿ ಘಟನೆಗಳ ಕುರಿತಂತೆ ವಿಶ್ವಸಂಸ್ಥೆಯು ನೈಜ ನಿಷ್ಪಕ್ಷಪಾತ ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ಸಂವಿಧಾನ ಮರುಸ್ಥಾಪಿಸಲು, ಅಲ್ಪಸಂಖ್ಯಾತರ ಹಿತರಕ್ಷಿಸಲು ಜನರು ಧ್ವನಿಯೆತ್ತಬೇಕು’ ಎಂದು ಕರೆ ನೀಡಿದ್ದಾರೆ.
ದೇಶ ಈಗ ತೀವ್ರವಾದಿ ಕೋಮುವಾದಿ ಶಕ್ತಿಗಳ ಮತ್ತು ವಿದೇಶಿ ದುಷ್ಕರ್ಮಿಗಳ ದಾಳಿಯಿಂದ ಧ್ವಂಸಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಹಸೀನಾ ಅವರು ಮಾತನಾಡಿದ್ದ ಧ್ವನಿಮುದ್ರಿಕೆಯನ್ನು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.
ಫೆಬ್ರುವರಿ 12ರಂದು ಬಾಂಗ್ಲಾದೇಶದ ಸಂಸತ್ತಿಗೆ ಚುನಾವಣೆ ನಡೆಯಲಿದ್ದು, ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.