ADVERTISEMENT

ಬಾಂಗ್ಲಾದೇಶ | ಚಿನ್ಮಯ್ ಕೃಷ್ಣ ದಾಸ್ ಬಿಡುಗಡೆಗೆ ಶೇಖ್ ಹಸೀನಾ ಆಗ್ರಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2024, 15:10 IST
Last Updated 28 ನವೆಂಬರ್ 2024, 15:10 IST
ಶೇಖ್ ಹಸೀನಾ
ಶೇಖ್ ಹಸೀನಾ   

ಢಾಕಾ: ಹಿಂದೂ ಸಂಘಟನೆ ‘ಸಮ್ಮಿಲಿತ್‌ ಸನಾತನಿ ಜಾಗರಣ ಜೋತೆ’ಯ ವಕ್ತಾರ ಚಿನ್ಮಯ್ ಕೃಷ್ಣ ದಾಸ್‌ ಅವರ ಬಂಧನ ನ್ಯಾಯಯುತವಲ್ಲ. ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಗುರುವಾರ ಆಗ್ರಹಿಸಿದ್ದಾರೆ. 

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನ ಅವಾಮಿ ಲೀಗ್ ಪಕ್ಷದ ಖಾತೆ ಮೂಲಕ ಟ್ವೀಟ್ ಮಾಡಿರುವ ಅವರು, ‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಹಾಗೂ ಅವರ ಧಾರ್ಮಿಕ ಕೇಂದ್ರಗಳ ಮೇಲಿನ ದಾಳಿಯನ್ನು ಖಂಡಿಸುತ್ತೇನೆ. ಎಲ್ಲಾ ಧರ್ಮೀಯರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸಬೇಕು’ ಎಂದು ಒತ್ತಾಯಿಸಿದ್ದಾರೆ.

'ಸನಾತನ ಧರ್ಮದ ಹಿರಿಯ ಮುಖಂಡರೊಬ್ಬರನ್ನು ಅನ್ಯಾಯವಾಗಿ ಬಂಧಿಸಲಾಗಿದೆ. ಚಿತ್ತಗಾಂಗ್‌ನಲ್ಲಿ ದೇವಾಲಯಗಳಿಗೆ ಬೆಂಕಿ ಹಚ್ಚಲಾಗಿದೆ. ಮಸೀದಿ, ದೇವಾಲಯ, ಚರ್ಚ್‌ ಸೇರಿದಂತೆ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆದಿದೆ. ಅವುಗಳನ್ನು ಹಾನಿಗೊಳಿಸಿ, ಲೂಟಿ ಮಾಡಲಾಗಿದೆ. ಎಲ್ಲಾ ಧರ್ಮೀಯರ ಧಾರ್ಮಿಕ ಸ್ವಾತಂತ್ರ್ಯವನ್ನು ಸರ್ಕಾರ ಖಾತ್ರಿಪಡಿಸಬೇಕು’ ಎಂದಿದ್ದಾರೆ.

ADVERTISEMENT

‘ಬಾಂಗ್ಲಾದೇಶದಲ್ಲಿ ಸದ್ಯ ಇರುವ ಮಧ್ಯಂತರ ಸರ್ಕಾರವು ಅವಾಮಿ ಲೀಗ್‌ ಪಕ್ಷದ ಮುಖಂಡರನ್ನು ಹಿಂಸಿಸುತ್ತಿದೆ. ಪಕ್ಷದ ಬಹಳಷ್ಟು ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಸ್ಥೆಗಳ ಸದಸ್ಯರನ್ನು ಹತ್ಯೆ ಮಾಡಲಾಗಿದೆ. ಈಗ ಉಳಿದವರ ಮೇಲೆ ಹಲ್ಲೆ, ದಾಳಿ, ಕಾನೂನು ಕ್ರಮ ಕೈಗೊಳ್ಳುವುದು ಮತ್ತು ಬಂಧನದ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಇಂಥ ಸರ್ವಾಧಿಕಾರಿ ಕ್ರಮವನ್ನು ಖಂಡಿಸುತ್ತೇನೆ’ ಎಂದು ಹಸೀನಾ ಹೇಳಿದ್ದಾರೆ.

‘ಚಿತ್ತಗಾಂಗ್‌ನಲ್ಲಿ ವಕೀಲರೊಬ್ಬರ ಹತ್ಯೆಯಾಗಿದೆ. ಇದನ್ನು ನಾನು ಭಲವಾಗಿ ಖಂಡಿಸುತ್ತೇನೆ. ಹಂತಕರನ್ನು ಕೂಡಲೇ ಪತ್ತೆ ಮಾಡಿ ಕಠಿಣ ಶಿಕ್ಷೆ ವಿಧಿಸಬೇಕು. ಇದರಲ್ಲಿ ಯಾವುದೇ ವಿಳಂಬವಾಗಬಾರದು. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹತ್ಯೆಗೀಡಾದ ವಕೀಲರು ತಮ್ಮ ಕೆಲಸ ಮಾಡುತ್ತಿದ್ದರು. ಅವರನ್ನು ಹತ್ಯೆಗೈದವರು ಭಯೋತ್ಪಾದಕರು. ಅವರು ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗಬೇಕು’ ಎಂದಿದ್ದಾರೆ.

‘ಅಕ್ರಮವಾಗಿ ಅಧಿಕಾರ ಕಬಳಿಸಿರುವ ಪ್ರಸಕ್ತ ಮಧ್ಯಂತರ ಸರ್ಕಾರವು ಸಾಮಾನ್ಯ ಜನರ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದಾಳಿ ನಡೆಸುತ್ತಿದೆ. ಇದು ಖಂಡನೀಯ. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ’ ಎಂದು ಹಸೀನಾ ಅರೋಪಿಸಿದ್ದಾರೆ.

2024ರ ಆರಂಭದಲ್ಲಿ ಸರ್ಕಾರಿ ಕೋಟಾ ಕುರಿತು ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ದೇಶದಾದ್ಯಂತ ವ್ಯಾಪಿಸಿದ ಪರಿಣಾಮ, ಶೇಖ್ ಹಸೀನಾ ಅವರು ದೇಶ ತೊರೆಯುವಂತಾಯಿತು. ಬಾಂಗ್ಲಾದೇಶದಲ್ಲಿ ಸದ್ಯ ಉಸ್ತುವಾರಿ ಸರ್ಕಾರವಿದೆ. ನೋಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್‌ ಅವರು ಮುಖ್ಯಸ್ಥರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.