ADVERTISEMENT

ಅಮೆರಿಕದಲ್ಲಿ ಸಿಖ್‌ ವ್ಯಕ್ತಿಯ ಮೇಲೆ ಸುತ್ತಿಗೆಯಿಂದ ದಾಳಿ: ಜನಾಂಗೀಯ ದ್ವೇಷದ ಶಂಕೆ

ಪಿಟಿಐ
Published 4 ಮೇ 2021, 5:38 IST
Last Updated 4 ಮೇ 2021, 5:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌: ಅಪರಿಚಿತ ಕಪ್ಪು ವರ್ಣೀಯನೊಬ್ಬ ಸಿಖ್ ಸಮುದಾಯದ ವ್ಯಕ್ತಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

‘ಅಸ್ಟೋರಿಯಾದ ನಿವಾಸಿ ಸುಮಿತ್‌ ಅಹ್ಲುವಾಲಿಯಾ ಮೇಲೆ ಹಲ್ಲೆ ನಡೆಸಿದ್ದು, ಜನಾಂಗೀಯ ದ್ವೇಷವೇ ಈ ದಾಳಿಗೆ ಕಾರಣ’ ಎಂದು ನ್ಯೂಯಾರ್ಕ್‌ ಡೈಲಿ ನ್ಯೂಸ್‌ ವರದಿ ಮಾಡಿದೆ.

’ಏಪ್ರಿಲ್‌ 26ರಂದು ನಾನು ಬ್ರೌನ್ಸ್ವಿಲ್ಲೆಯ ಕ್ವಾಲಿಟಿ ಇನ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಕಪ್ಪು ವರ್ಣೀಯ ವ್ಯಕ್ತಿಯೊಬ್ಬರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಹೋಟೆಲ್‌ನ ಲಾಬಿಗೆ ಬಂದ ಅವರು ಮಹಿಳಾ ಸಿಬ್ಬಂದಿ ಮೇಲೆ ಕೂಗಾಡಲು ಆರಂಭಿಸಿದರು. ಆಗ ನಾನು ಏನಾದರೂ ಸಹಾಯ ಬೇಕೇ ಎಂದು ಅವರನ್ನು ಕೇಳಿದೆ. ಈ ವೇಳೆ ಅವರು, ನೀನು ನನ್ನಂತೆ ಬಣ್ಣವನ್ನು ಹೊಂದಿಲ್ಲ. ನನಗೆ ನೀನು ಇಷ್ಟವಿಲ್ಲ ಎಂದು ಹೇಳಿ, ನನ್ನ ತಲೆಗೆ ಸುತ್ತಿಗೆಯಿಂದ ಹೊಡೆದರು. ಬಳಿಕ ಅಲ್ಲಿಂದ ಓಡಿ ಹೋದರು’ ಎಂದು ಅಹ್ಲುವಾಲಿಯಾ ತಿಳಿಸಿದರು.

ADVERTISEMENT

‘ಈ ಬಳಿಕ ನನಗೆ ಏನಾಯಿತು ತಿಳಿದಿಲ್ಲ. ನನ್ನನ್ನು ತುರ್ತು ಚಿಕಿತ್ಸಾ ಕೋಣೆಗೆ ಕರೆದೊಯ್ಯಲಾಯಿತು. ನಾನೊಬ್ಬ ಸಾಮಾನ್ಯ ನಾಗರಿಕ. ನನಗೆ ನ್ಯಾಯ ಬೇಕು’ ಎಂದು ಅವರು ಹೇಳಿದರು.

‘ಪೊಲೀಸರು ಶಂಕಿತನ ಫೋಟೊವನ್ನು ಬಿಡುಗಡೆಗೊಳಿಸಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.