ADVERTISEMENT

ದ್ವೇಷ ಭಾಷಣ: ಜಾಲತಾಣಗಳಿಗೆ ತಟ್ಟಿದ ಬಿಸಿ

ಸಾಮಾಜಿಕ ವೇದಿಕೆಗಳಿಗೆ ಜಾಹೀರಾತು ನಿರಾಕರಿಸಿದ ಕಾರ್ಪೊರೇಟ್‌ ಕಂಪನಿಗಳು

ಏಜೆನ್ಸೀಸ್
Published 30 ಜೂನ್ 2020, 8:17 IST
Last Updated 30 ಜೂನ್ 2020, 8:17 IST
ಸಾಮಾಜಿಕ ಮಾಧ್ಯಮಗಳಲ್ಲಿನ ನೋಟ– ಪ್ರಾತಿನಿಧಿಕ ಚಿತ್ರ
ಸಾಮಾಜಿಕ ಮಾಧ್ಯಮಗಳಲ್ಲಿನ ನೋಟ– ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಸಾಮಾಜಿಕ ಜಾಲತಾಣಗಳು ಹಲವು ವರ್ಷಗಳಿಂದ ರಾಜಕೀಯ ಧ್ರುವೀಕರಣ ಹಾಗೂ ದ್ವೇಷ ಭಾಷಣಗಳಿಗೆ ವೇದಿಕೆಯಾಗಿವೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ನಾಲ್ಕು ತಿಂಗಳು ಉಳಿದಿರುವಂತೆ, ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ. ಜನರ ಒತ್ತಾಯಕ್ಕೆ ಮಣಿದು, ಸಮಾಜಿಕ ಜಾಲತಾಣಗಳು ಈಗ ತಮ್ಮ ನೀತಿಯಲ್ಲಿ ಬದಲಾವಣೆಗೆ ಮುಂದಾಗಿವೆ. ಧರ್ಮಾಂಧತೆ ಹಾಗೂ ಹಿಂಸಾಚಾರದ ಬೆದರಿಕೆಗಳ ವಿರುದ್ಧ ಈ ಸಂಸ್ಥೆಗಳು ಕಠಿಣ ಕ್ರಮಕ್ಕೆ ಮುಂದಾಗಿವೆ.

ಆದರೆ, ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತಾವಾಗಿಯೇ ಇಂಥ ಕ್ರಮಕ್ಕೆ ಮುಂದಾಗಿಲ್ಲ. ಸಾರ್ವಜನಿಕರಿಂದ ಒತ್ತಡ ಹೆಚ್ಚಾಗುತ್ತಿರುವುದು ಒಂದೆಡೆಯಾದರೆ, ಇಂಥ ವಿಚಾರಗಳನ್ನು ಪ್ರಸಾರ ಮಾಡುವ ಸಂಸ್ಥೆಗಳಿಗೆ ಜಾಹೀರಾತು ನೀಡುವುದನ್ನು ಕೆಲವು ಕಾರ್ಪೊರೇಟ್‌ ಸಂಸ್ಥೆಗಳು ಬಹಿಷ್ಕರಿಸಿವೆ. ಇದರಿಂದ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗಿ ಬಂದಿದೆ.

ಇಂಥ ಕ್ರಮ ಕೈಗೊಳ್ಳುವುದು ತಡವಾಯಿತೇ, ನಿಜವಾಗಿಯೂ ಕಠಿಣ ಕ್ರಮಗಳನ್ನು ಸಂಸ್ಥೆಗಳು ಕೈಗೊಳ್ಳುವವೇ, ಸಾಮಾಜಿಕ ಮಾಧ್ಯಮಗಳನ್ನು ಬಹಿಷ್ಕರಿಸುವ ಕಾರ್ಪೊರೇಟ್‌ ಸಂಸ್ಥೆಗಳ ಕ್ರಮವು ದೀರ್ಘಾವಧಿಯ ಬದಲಾವಣೆಗೆ ಕಾರಣವಾಗಬಲ್ಲದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ADVERTISEMENT

ಪ್ರಮುಖ ಸಾಮಾಜಿಕ ಮಾಧ್ಯಮ ಸಂಸ್ಥೆಗಳಲ್ಲಿ ಒಂದೆನಿಸಿರುವ ‘ರೆಡಿಟ್‌’, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಬೆಂಬಲಿಸುವ ವೇದಿಕೆಯೊಂದನ್ನು ತನ್ನ ದ್ವೇಷಭಾಷಣ ತಡೆ ನೀತಿಗೆ ಅನುಗುಣವಾಗಿ ಈಚೆಗೆ ನಿಷೇಧಿಸಿದೆ. ಅಮೆಜಾನ್‌ ಮಾಲೀಕತ್ವದ ನೇರ ಪ್ರಸಾರ ಸಂಸ್ಥೆ ‘ಟ್ವಿಚ್‌’ ಸಹ ಟ್ರಂಪ್‌ ಅವರ ಪ್ರಚಾರ ಖಾತೆಯನ್ನು ‘ದ್ವೇಷದ ನಡವಳಿಕೆ ನಿಯಮ ಉಲ್ಲಂಘನೆ’ಯ ಕಾರಣ ನೀಡಿ ಸ್ಥಗಿತಗೊಳಿಸಿದೆ.

ಶ್ವೇತವರ್ಣೀಯ ಅನೇಕ ರಾಷ್ಟ್ರೀಯವಾದಿಗಳನ್ನು ಯೂಟ್ಯೂಬ್‌ ಸಂಸ್ಥೆಯು ನಿಷೇಧಿಸಿದೆ. ಇವರಲ್ಲಿ ಕೆಲವು ಗಣ್ಯ ವ್ಯಕ್ತಿಗಳೂ ಸೇರಿದ್ದಾರೆ. ‘ತಮ್ಮ ವೇದಿಕೆಗಳಲ್ಲಿ ದ್ವೇಷಭಾಷಣ ಮತ್ತು ತಪ್ಪು ಮಾಹಿತಿಗೆ ಸಂಬಂಧಿಸಿದಂತೆ ಪರಿಹರಿಸಲು ಸಾಧ್ಯವಾಗದಂಥ ಕಾರಣಗಳನ್ನು ಚಿಂತಕರು ನೀಡುತ್ತಿದ್ದಾರೆ’ ಎಂದು ಫೇಸ್‌ಬುಕ್‌ ನೇತೃತ್ವದಲ್ಲಿ ಕೆಲವು ಸಾಮಾಜಿಕ ಜಾಲತಾಣ ಕಂಪನಿಗಳು ವಾದಿಸಿವೆ.

ಜುಲೈ ತಿಂಗಳಲ್ಲಿ ಫೇಸ್‌ಬುಕ್‌ಗೆ ಜಾಹೀರಾತು ನೀಡುವುದನ್ನು ಸ್ಥಗಿತಗೊಳಿಸುವಂತೆ ನಾಗರಿಕ ಹಕ್ಕುಗಳ ಸಂಘಟನೆಗಳು ಹಿರಿಯ ಕಾರ್ಪೊರೇಟ್‌ ಸಂಸ್ಥೆಗಳಿಗೆ ಮನವಿ ಮಾಡಿವೆ. ಜನಾಂಗೀಯ ಹಾಗೂ ಹಿಂಸಾತ್ಮಕ ವಿಚಾರಗಳನ್ನು ಒಳಗೊಂಡ ಮಾಹಿತಿ ಪ್ರಸರಣವನ್ನು ತಡೆಯಲು ಈ ಸಾಮಾಜಿಕ ಜಾಲತಾಣವು ಸಾಕಷ್ಟು ಕೆಲಸವನ್ನು ಮಾಡುತ್ತಿಲ್ಲ ಎಂದು ಸಂಘಟನೆಗಳು ಆರೋಪಿಸಿವೆ.

ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚು ಜಾಹೀರಾತುಗಳನ್ನು ನೀಡುವ ಯೂನಿಲಿವರ್‌ ಸಂಸ್ಥೆ, ವೆರಿಜಾನ್‌, ಫೋರ್ಡ್‌ ಹಾಗೂ ಇನ್ನೂ ಅನೇಕ ಸಣ್ಣ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿವೆ. ಪ್ರತಿದಿನವೂ ಹೊಸಹೊಸ ಸಂಸ್ಥೆಗಳು ಸೇರ್ಪಡೆಯಾಗುತ್ತಿವೆ. ಇವುಗಳಲ್ಲಿ ಕೆಲವು ಜುಲೈ ತಿಂಗಳಿಗೆ ಮಾತ್ರ ಬಹಿಷ್ಕಾರವನ್ನು ಜಾರಿ ಮಾಡಿದ್ದರೆ ಕೆಲವು ಸಂಸ್ಥೆಗಳು ವರ್ಷಾಂತ್ಯದವರೆಗೂ ಬಹಿಷ್ಕರಿಸುವುದಾಗಿ ಹೇಳಿವೆ. ಕೆಲವು ಫೇಸ್‌ಬುಕ್‌ ಅನ್ನು ಮಾತ್ರ ಬಹಿಷ್ಕರಿಸಿದ್ದರೆ, ಇನ್ನೂ ಕೆಲವು ಟ್ವಿಟರ್‌ ಹಾಗೂ ಇತರ ಜಾಲತಾಣಗಳನ್ನೂ ದೂರವಿಡಲು ನಿರ್ಧರಿಸಿವೆ.

ದ್ವೇಷಭಾಷಣ, ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವುದು, ಜನಾಂಗೀಯ ನ್ಯಾಯ ಮುಂತಾದವುಗಳನ್ನು ಸಾಮಾಜಿಕ ಜಾಲತಾಣಗಳಿಂದ ಮುಕ್ತಗೊಳಿಸಬೇಕಾಗಿದೆ. ಆದ್ದರಿಂದ ಮುಂದಿನ 30 ದಿನಗಳವರೆಗೆ ಯಾವುದೇ ಸಾಮಾಜಿಕ ಜಾಲತಾಣಕ್ಕೆ ಜಾಹೀರಾತು ನೀಡುವುದಿಲ್ಲ ಎಂದು ಫೋರ್ಡ್‌ ಸಂಸ್ಥೆ ಸೋಮವಾರ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.