ADVERTISEMENT

ಕಿಮ್‌ –ಪುಟಿನ್‌ ಭೇಟಿ: ದಕ್ಷಿಣ ಕೊರಿಯಾ ತೀವ್ರ ಕಳವಳ

ಆಧುನಿಕ ತಂತ್ರಜ್ಞಾನ ನೆರವು–ದಕ್ಷಿಣ ಕೊರಿಯಾ ಆತಂಕ * ಪರಿಣಾಮ ಎದುರಿಸಬೇಕಾದಿತು –ಅಮೆರಿಕ

ಎಪಿ
Published 14 ಸೆಪ್ಟೆಂಬರ್ 2023, 11:15 IST
Last Updated 14 ಸೆಪ್ಟೆಂಬರ್ 2023, 11:15 IST
<div class="paragraphs"><p>ಕಿಮ್‌ ಜಾಂಗ್‌ ಉನ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್</p></div>

ಕಿಮ್‌ ಜಾಂಗ್‌ ಉನ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

   

ಸೋಲ್ (ಎ.ಪಿ): ಉತ್ತರ ಕೊರಿಯಾದ ನಾಯಕ ಕಿಮ್‌ ಜಾಂಗ್ ಉನ್‌ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಬುಧವಾರ ಭೇಟಿಯಾಗಿ ಸೇನಾ ಸಹಕಾರ ಸೇರಿ ಹಲವು ವಿಷಯಗಳನ್ನು ಚರ್ಚಿಸಿರುವುದಕ್ಕೆ ದಕ್ಷಿಣ ಕೊರಿಯಾ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅಣ್ವಸ್ತ್ರಸಜ್ಜಿತ ಎರಡೂ ದೇಶಗಳ ನಾಯಕರ ನಡುವಿನ ಚರ್ಚೆ ಅಮೆರಿಕ ಜೊತೆಗಿನ ಸಂಘರ್ಷ ಹೆಚ್ಚಿಸುವ ಸೂಚನೆ ಎಂದು ಹೇಳಲಾಗಿದೆ. ಅಮೆರಿಕ ಕೂಡ ಉಭಯ ನಾಯಕರ ಭೇಟಿ ಪರಿಣಾಮವಾಗಿ ರಷ್ಯಾಗೆ ಹೆಚ್ಚಿನ ಶಸ್ತ್ರಾಸ್ತ್ರಗಳ ಪೂರೈಕೆ ಆಗಬಹುದು ಎಂದು ಅಂದಾಜಿಸಿದೆ.

ADVERTISEMENT

‘ಶಸ್ತ್ರಾಸ್ತ್ರ ಪೂರೈಕೆಗೆ ಪ್ರತಿಯಾಗಿ ಉತ್ತರ ಕೊರಿಯಾವು ಸೇನಾ ಕಣ್ಗಾವಲು ಸ್ಯಾಟಲೈಟ್‌ಗಳು ಸೇರಿ ಆಧುನಿಕ ಶಸ್ತ್ರಾಸ್ತ್ರಗಳ ತಂತ್ರಜ್ಞಾನವನ್ನು ಪಡೆಯಬಹುದು’ ಎಂದು ದಕ್ಷಿಣ ಕೊರಿಯಾ ವಿದೇಶಾಂಗ ಸಚಿವಾಲಯದ ವಕ್ತಾರ ಲಿಮ್‌ ಸೂ ಸುಕ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಖಂಡಾಂತರ ಕ್ಷಿಪಣಿ ತಂತ್ರಜ್ಞಾನ ಕುರಿತ ಅಣ್ವಸ್ತ್ರ ಮತ್ತು ಕ್ಷಿಪಣಿ ಅಭಿವೃದ್ಧಿಗಾಗಿ ನೀಡುವ ಯಾವುದೇ ರೀತಿಯ ವಿಜ್ಞಾನ ಹಾಗೂ ತಂತ್ರಜ್ಞಾನದ ನೆರವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಕ್ಕೆ ವಿರುದ್ಧವಾದುದಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಉತ್ತರ ಕೊರಿಯಾ ಜೊತೆಗಿನ ಬಾಂಧವ್ಯವು ಹಲವು ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ ಎಂಬುದನ್ನು ರಷ್ಯಾವು ಅರ್ಥ ಮಾಡಿಕೊಳ್ಳಬೇಕು ಎಂದೂ ಅವರು ಎಚ್ಚರಿಸಿದರು.

ಅಮೆರಿಕ ಎಚ್ಚರಿಕೆ: ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರಾದ ಜಾನ್‌ ಕಿರ್ಬಿ ಅವರು, ರಷ್ಯಾಗೆ ಯಾವುದೇ ರೀತಿಯ ಶಸ್ತ್ರ್ರಾಸ್ತ್ರಗಳನ್ನು ಉತ್ತರ ಕೊರಿಯಾ ಪೂರೈಸಿದ್ದೇ ಆದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾದಿತು ಎಂದು ಎಚ್ಚರಿಸಿದರು.

‘ಉಕ್ರೇನ್‌ನಲ್ಲಿ ಅಮಾಯಕರನ್ನು ಕೊಲ್ಲುವುದಕ್ಕಾಗಿ ಪುಟಿನ್ ಅವರಿಗೆ ಯಾವುದೇ ದೇಶ ನೆರವು ನೀಡಬಾರದು’ ಎಂದು ಅವರು ಪ್ರತಿಪಾದಿಸಿದರು. ‘ಶಸ್ತ್ರಾಸ್ತ್ರ ಪೂರೈಕೆಯಾದಲ್ಲಿ ಅಮೆರಿಕವು ಅದನ್ನು ಸೂಕ್ತ ರೀತಿಯಲ್ಲಿ ಎದುರಿಸಲಿದೆ’ ಎಂದು ಸ್ಪಷ್ಟಪಡಿಸಿದರು.

ಪುಟಿನ್‌ಗೆ ಸ್ವಾಗತ: ಈ ಮಧ್ಯೆ ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆಯು, ‘ಸೂಕ್ತ ಸಮಯ’ದಲ್ಲಿ ಉತ್ತರ ಕೊರಿಯಾಗೆ ಭೇಟಿ ನೀಡುವಂತೆ ಪುಟಿನ್‌ ಅವರಿಗೆ ಕಿಮ್‌ ಆಹ್ವಾನ ನೀಡಿದ್ದಾರೆ’ ಎಂದು ವರದಿ ಮಾಡಿದೆ. 

ಇತ್ತ, ರಷ್ಯಾದಲ್ಲಿ ಟಿ.ವಿ. ವಾಹಿನಿಯ ಜೊತೆಗೆ ಮಾತನಾಡಿರುವ ಪುಟಿನ್ ಅವರು, ರಷ್ಯಾದ ಇನ್ನೂ ಎರಡು ನಗರಗಳಿಗೆ ಕಿಮ್‌ ಅವರು ಭೇಟಿ ನೀಡಲಿದ್ದಾರೆ. ಕೊಮ್‌ಸೊಮೊಸ್ಕ್ ನಗರದಲ್ಲಿ ವಿಮಾನ ತಯಾರಿಕಾ ಘಟಕಕ್ಕೂ ಭೇಟಿ ನೀಡುವರು ಎಂದು ತಿಳಿಸಿದ್ದಾರೆ.

ರಷ್ಯಾ ಮತ್ತು ಉತ್ತರ ಕೊರಿಯಾ ಸಾಕಷ್ಟು ಆಸಕ್ತಿದಾಯಕವಾದ ಯೋಜನೆಗಳನ್ನು ಹೊಂದಿವೆ. ಸಾರಿಗೆ, ಕೃಷಿ ಕ್ಷೇತ್ರವು ಇದರಲ್ಲಿ ಸೇರಿದೆ. ರಷ್ಯಾ ಮಾನವೀಯ ಆಧಾರದಲ್ಲಿ ಅಗತ್ಯವಿರುವ ನೆರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

ಆದರೆ, ಉಭಯ ರಾಷ್ಟ್ರಗಳ ನಡುವೆ ಸೇನಾ ಸಹಕಾರ ಕುರಿತಂತೆ ಅವರು ಸದ್ಯ ಪ್ರತಿಕ್ರಿಯಿಸಿಲ್ಲ. ‘ಉತ್ತರ ಕೊರಿಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಇರುವ ನಿರ್ಬಂಧಗಳಿಗೆ ರಷ್ಯಾ ಬದ್ಧವಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.