ADVERTISEMENT

ಸ್ವದೇಶಿ ರಾಕೆಟ್ ಪರೀಕ್ಷಾರ್ಥ ಉಡಾವಣೆ ಮಾಡಿದ ದಕ್ಷಿಣ ಕೊರಿಯಾ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 13:03 IST
Last Updated 21 ಅಕ್ಟೋಬರ್ 2021, 13:03 IST
ದಕ್ಷಿಣ ಕೊರಿಯಾದ ಗೊಹೆಂಗ್‌ನಲ್ಲಿರುವ ನ್ಯಾರೋ ರಾಕೆಟ್‌ ಉಡಾವಣಾ ಕೇಂದ್ರದಿಂದ ನೂರಿ ರಾಕೆಟ್‌ ಅನ್ನು ಗುರುವಾರ ಉಡಾವಣೆ ಮಾಡಲಾಯಿತು
ದಕ್ಷಿಣ ಕೊರಿಯಾದ ಗೊಹೆಂಗ್‌ನಲ್ಲಿರುವ ನ್ಯಾರೋ ರಾಕೆಟ್‌ ಉಡಾವಣಾ ಕೇಂದ್ರದಿಂದ ನೂರಿ ರಾಕೆಟ್‌ ಅನ್ನು ಗುರುವಾರ ಉಡಾವಣೆ ಮಾಡಲಾಯಿತು   

ಸೋಲ್‌: ದಕ್ಷಿಣ ಕೊರಿಯಾ ದೇಶೀಯವಾಗಿ ಅಭಿವೃದ್ಧಿಪಡಿಸಿದ ತನ್ನ ಮೊಟ್ಟಮೊದಲ ಬಾಹ್ಯಾಕಾಶ ರಾಕೆಟ್ ಅನ್ನು ಗುರುವಾರ ಪರೀಕ್ಷಾರ್ಥ ಉಡಾವಣೆ ಮಾಡಿತು.

ದೇಶದ ಉಪಗ್ರಹ ಉಡಾವಣಾ ಯೋಜನೆಯ ಅನ್ವೇಷಣೆಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಅಧಿಕಾರಿಗಳು ವ್ಯಾಖ್ಯಾನಿಸಿದ್ದಾರೆ.

ಮೂರು-ಹಂತದ ನೂರಿ ರಾಕೆಟ್ 1.5 ಟನ್ ಸ್ಟೇನ್ಲೆಸ್ ಸ್ಟೀಲ್ ಮತ್ತು ಅಲ್ಯೂಮಿನಿಯಂನ ಬ್ಲಾಕ್ ಡಮ್ಮಿ ಪೇಲೋಡ್ ಅನ್ನು ಭೂಮಿಯಿಂದ 600 ರಿಂದ 800 ಕಿ.ಮೀ (372 ರಿಂದ 497 ಮೈಲಿ) ಎತ್ತರದ ಕಕ್ಷೆಗೆ ತಲುಪಿಸುವ ಗುರಿಯನ್ನು ಯಶಸ್ವಿಯಾಗಿ ಪೂರೈಸಿದೆಯೇ ಎಂಬುದು ತಕ್ಷಣಕ್ಕೆ ಖಚಿತವಾಗಿಲ್ಲ.

ADVERTISEMENT

ತನ್ನ ಉಪಗ್ರಹಗಳನ್ನು ಉಡಾಯಿಸಲು ಇತರ ದೇಶಗಳನ್ನು ಅವಲಂಬಿಸಿರುವ ದಕ್ಷಿಣ ಕೊರಿಯಾ ಸ್ವದೇಶಿ ತಂತ್ರಜ್ಞಾನದೊಂದಿಗೆ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ 10ನೇ ರಾಷ್ಟ್ರವೆನಿಸಿಕೊಳ್ಳಲು1990ರ ದಶಕದ ಆರಂಭದಿಂದಲೂ ಪ್ರಯತ್ನಿಸುತ್ತಿದೆ.

ದೇಶದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಇಂತಹ ಪರೀಕ್ಷಾರ್ಥ ಪ್ರಯೋಗ ನಿರ್ಣಾಯಕವಾಗಿದೆ. ಇದರಲ್ಲಿ ಹೆಚ್ಚು ಸುಧಾರಿತ ಸಂವಹನ ಉಪಗ್ರಹಗಳನ್ನು ಕಳುಹಿಸುವ ಮತ್ತು ತನ್ನದೇ ಆದ ಮಿಲಿಟರಿ ಗುಪ್ತಚರ ಉಪಗ್ರಹಗಳನ್ನು ಕಳುಹಿಸುವ ಯೋಜನೆಗಳು ಸೇರಿವೆ. 2030ರ ವೇಳೆಗೆ ಚಂದ್ರನಲ್ಲಿಗೆ ಬಾಹ್ಯಾಕಾಶ ನೌಕೆ ಕಳುಹಿಸುವ ವಿಶ್ವಾಸವನ್ನೂ ದೇಶ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೂರಿ ಬಾಹ್ಯಾಕಾಶ ರಾಕೆಟ್‌ನಲ್ಲಿ ನೈಜ ಉಪಗ್ರಹ ಕಳುಹಿಸುವ ಮೊದಲು 2022ರಲ್ಲಿ ಮತ್ತೊಮ್ಮೆ ಈ ರಾಕೆಟ್‌ ಉಡಾವಣೆ ಮಾಡುವ ಜತೆಗೆ ಹಲವು ಬಾರಿ ಇದನ್ನು ಪರೀಕ್ಷೆಗೆ ಒಳಪಡಿಸಲು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.