ADVERTISEMENT

ಮುವಾನ್‌ ವಿಮಾನ ದುರಂತ: ಬೋಯಿಂಗ್‌ ವಿಮಾನಗಳ ತಪಾಸಣೆ ನಡೆಸಲು ನಿರ್ಧಾರ

ಏಜೆನ್ಸೀಸ್
Published 30 ಡಿಸೆಂಬರ್ 2024, 14:01 IST
Last Updated 30 ಡಿಸೆಂಬರ್ 2024, 14:01 IST
<div class="paragraphs"><p>ಅಪಘಾತಗೊಂಡ ಜೆಜು ಏರ್ ವಿಮಾನವು ಹೊತ್ತಿ ಉರಿದ ಸಂದರ್ಭ&nbsp;</p></div>

ಅಪಘಾತಗೊಂಡ ಜೆಜು ಏರ್ ವಿಮಾನವು ಹೊತ್ತಿ ಉರಿದ ಸಂದರ್ಭ 

   

ಸೋಲ್ (ದಕ್ಷಿಣ ಕೊರಿಯಾ): ‘ದೇಶದ ವಿಮಾನಯಾನ ಸಂಸ್ಥೆಗಳಲ್ಲಿರುವ ಎಲ್ಲ ಬೋಯಿಂಗ್‌ 737–800 ಸರಣಿಯ ಎಲ್ಲ ವಿಮಾನಗಳನ್ನು ಸುರಕ್ಷತಾ ತಪಾಸಣೆ ನಡೆಸಲಾಗುವುದು’ ಎಂದು ದಕ್ಷಿಣ ಕೊರಿಯಾ ತಿಳಿಸಿದೆ.

ದಕ್ಷಿಣ ಕೊರಿಯಾದ ಮುವಾನ್ ವಿಮಾನ ನಿಲ್ದಾಣದಲ್ಲಿ ಭಾನುವಾರ ರನ್‌ವೇನಿಂದ ಪಕ್ಕಕ್ಕೆ ಜಾರಿದ ವಿಮಾನವು ಕಾಂಕ್ರೀಟ್ ಗೋಡೆಗೆ ಡಿಕ್ಕಿ ಹೊಡೆದು ಸ್ಫೋಟಿಸಿ, ಅದರಲ್ಲಿದ್ದ 181 ಮಂದಿಯ ಪೈಕಿ 179 ಮಂದಿ ಜೀವ ಕಳೆದುಕೊಂಡಿದ್ದರು. ಜೆಜು ಏರ್ ವಿಮಾನಯಾನ ಕಂಪನಿಗೆ ಸೇರಿದ್ದ ವಿಮಾನ ಇದಾಗಿತ್ತು. ಕಳೆದೊಂದು ದಶಕದಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಇದು ಒಂದಾಗಿದೆ. 

ADVERTISEMENT

ಹಂಗಾಮಿ ಅಧ್ಯಕ್ಷ ಚೊಯ್‌ ಸಂಗ್‌ ಮೊಕ್‌ ಅವರು ಸೋಮವಾರ ಟಾಸ್ಕ್‌ಫೋರ್ಸ್‌ ಸಭೆ ನಡೆಸಿದರು. ಇಡೀ ದೇಶದಲ್ಲಿನ ವಿಮಾನಯಾನ ಕಾರ್ಯಾಚರಣೆ ವ್ಯವಸ್ಥೆಯನ್ನು ತುರ್ತಾಗಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ದೇಶದಲ್ಲಿ 737–800 ಸರಣಿಯ 101 ವಿಮಾನಗಳಿದ್ದು, ಭಾನುವಾರ ಅಪಘಾತ ಸಂಭವಿಸಿದ ಜೆಜು ವಿಮಾನಯಾನ ಸಂಸ್ಥೆಗಳಲ್ಲಿ ಇಂತಹ 39 ವಿಮಾನಗಳಿವೆ. ಎಲ್ಲ ವಿಮಾನಗಳ ತಪಾಸಣಾ ಕಾರ್ಯ ಕೈಗೊಳ್ಳಲಾಗುವುದು. ಭಾನುವಾರ ನಡೆದ ಪ್ರಕರಣದ ತನಿಖೆಗೆ ಕೈಜೋಡಿಸಲು ಅಮೆರಿಕ ರಾಷ್ಟ್ರೀಯ ಸುರಕ್ಷಾ ತಂಡವು ದಕ್ಷಿಣ ಕೊರಿಯಾಕ್ಕೆ ಬಂದಿಳಿಯಲಿದೆ’ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಜೂ ಜಾಂಗ್‌ ವಾನ್‌ ತಿಳಿಸಿದ್ದಾರೆ.

ಇದುವರೆಗೆ 146 ಮಂದಿಯ ಮೃತದೇಹಗಳನ್ನು ಗುರುತಿಸಲಾಗಿದ್ದು, ಉಳಿದ 33 ಮಂದಿಯ ಗುರುತು ಪತ್ತೆಗಾಗಿ ಸಂಬಂಧಿಗಳ ಡಿಎನ್‌ಎ ಪರೀಕ್ಷೆ ನಡೆಸಲು ಸಾರಿಗೆ ಸಚಿವಾಲಯವು ನಿರ್ಧರಿಸಿದೆ. ಕೆಲವು ಸಂಪೂರ್ಣ‌ವಾಗಿ ಸುಟ್ಟ ಕಾರಣ, ಕುಟುಂಬಸ್ಥರಿಗೆ ಹಸ್ತಾಂತರಿಸಲು ಹೆಚ್ಚಿನ ಸಮಯ ಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.