ADVERTISEMENT

ಬುರ್ಖಾ ನಿಷೇಧಿಸಲು ಶ್ರೀಲಂಕಾ ಸರ್ಕಾರ ನಿರ್ಧಾರ

ಏಜೆನ್ಸೀಸ್
Published 14 ಮಾರ್ಚ್ 2021, 10:55 IST
Last Updated 14 ಮಾರ್ಚ್ 2021, 10:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೊಲಂಬೊ: ರಾಷ್ಟ್ರೀಯ ಭದ್ರತೆ ಕಾರಣ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ನಿಷೇಧಿಸಲು ಹಾಗೂ 1,000ಕ್ಕೂ ಅಧಿಕ ಮದರಸಾಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಪ್ರಕಟಿಸಿದೆ.

‘ಈ ವಿಷಯಕ್ಕೆ ಸಂಬಂಧಿಸಿದ ಪ್ರಸ್ತಾವಕ್ಕೆ ಸಹಿ ಹಾಕಿದ್ದು, ಅದನ್ನು ಅನುಮೋದನೆಗಾಗಿ ಸಚಿವ ಸಂಪುಟಕ್ಕೆ ಕಳುಹಿಸಲಾಗುವುದು’ ಎಂದು ಸಾರ್ವಜನಿಕ ಭದ್ರತಾ ಸಚಿವ ಶರತ್‌ ವೀರಶೇಖರ ಹೇಳಿದ್ದಾರೆ.

ಬೌದ್ಧ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಬುರ್ಖಾ ಧಾರಣೆ ರಾಷ್ಟ್ರದ ಭದ್ರತೆ ಮೇಲೆ ನೇರ ಪರಿಣಾಮ ಬೀರುತ್ತದೆ’ ಎಂದು ಸಚಿವ ವೀರಶೇಖರ ಹೇಳಿರುವ ವಿಡಿಯೊವೊಂದನ್ನು ಸಾರ್ವಜನಿಕ ಭದ್ರತಾ ಸಚಿವಾಲಯ ಹಂಚಿಕೊಂಡಿದೆ.

ADVERTISEMENT

‘ನಾನು ಚಿಕ್ಕವನಿದ್ದಾಗ ಸಾಕಷ್ಟು ಜನ ಮುಸ್ಲಿಂ ಗೆಳೆಯರಿದ್ದರು. ಆಗ, ಮುಸ್ಲಿಂ ಮಹಿಳೆಯರಾಗಲಿ, ಬಾಲಕಿಯರಾಗಲಿ ಬುರ್ಖಾ ಧರಿಸುತ್ತಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಅದು ಧಾರ್ಮಿಕ ಉಗ್ರವಾದದ ಸಂಕೇತವಾಗಿದೆ. ಹೀಗಾಗಿ, ಬುರ್ಖಾ ಧರಿಸುವುದನ್ನು ನಿಶ್ಚಿತವಾಗಿಯೂ ನಿಷೇಧಿಸುತ್ತೇವೆ’ ಎಂದೂ ವೀರಶೇಖರ ಹೇಳಿದ್ದಾರೆ.

‘ದೇಶದಲ್ಲಿ ಸಾವಿರಕ್ಕೂ ಅಧಿಕ ಮದರಸಾಗಳು ಇವೆ. ಇವು ರಾಷ್ಟ್ರೀಯ ಶಿಕ್ಷಣ ನೀತಿ ಅನುಸಾರ ಕಾರ್ಯ ನಿರ್ವಹಿಸುತ್ತಿಲ್ಲ. ಸಂಬಂಧಪಟ್ಟ ಪ್ರಾಧಿಕಾರದಲ್ಲಿ ಇವುಗಳು ನೋಂದಣಿಯನ್ನೂ ಮಾಡಿಲ್ಲ. ಹೀಗಾಗಿ ಈ ಮದರಸಾಗಳನ್ನು ಸಹ ಬಂದ್‌ ಮಾಡಲಾಗುವುದು’ ಎಂದರು ಹೇಳಿದ್ದಾರೆ.

2019ರಲ್ಲಿ ಈಸ್ಟರ್‌ ದಿನ ಚರ್ಚ್‌ ಹಾಗೂ ಹೋಟೆಲ್‌ಗಳ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ 260ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. ಈ ಘಟನೆ ನಂತರ ಬುರ್ಖಾ ಧರಿಸುವುದನ್ನು ಶ್ರೀಲಂಕಾ ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.