ಬೀಜಿಂಗ್: ಟಿಬೆಟ್‌ನಲ್ಲಿ ಮಂಗಳವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 126 ಜನರು ಮೃತಪಟ್ಟಿದ್ದು, 188 ಮಂದಿ ಗಾಯಗೊಂಡಿದ್ದಾರೆ.
ಚೀನಾದ ಟಿಬೆಟ್ ಸ್ವಾಯತ್ತ ಪ್ರದೇಶ ಕ್ಸಿಗಾಸೆಯ ಡಿಂಗ್ರಿ ಕೌಂಟಿಯಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 9.05ಕ್ಕೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ 6.8ರಷ್ಟು ದಾಖಲಾಗಿದೆ. ಆದರೆ, ಯುನೈಟೆಡ್ ಸ್ಟೇಟ್ಸ್ ಜಿಯಾಲಜಿಕಲ್ ಸರ್ವಿಸ್ (ಯುಎಸ್‌ಜಿಎಸ್) ಪ್ರಕಾರ ಭೂಕಂಪದ ತೀವ್ರತೆ 7.1ರಷ್ಟಿತ್ತು.
ಮನೆಗಳು ಮತ್ತು ಹಲವು ಕಟ್ಟಡಗಳು ನೆಲಸಮವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಆತಂಕ ಇದೆ. ನೇಪಾಳ ಮತ್ತು ಉತ್ತರ ಭಾರತದ ಕೆಲವೆಡೆ ಭೂಮಿ ಕಂಪಿಸಿದ ಅನುಭವ ಆಗಿದೆ.
ಭೂಕಂಪದಿಂದ ತೊಂದರೆಗೆ ಒಳಗಾದ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಆದೇಶಿಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲು ಹಾಗೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಒಳಗೊಂಡಂತೆ 1,500ಕ್ಕೂ ಅಧಿಕ ಮಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನಿರ್ವಸಿತರಾದವರಿಗೆ ಟೆಂಟ್‌ಗಳು, ಮಂಚ ಮತ್ತು ಹಾಸಿಗೆ ಒಳಗೊಂಡಂತೆ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲಾಗಿದೆ.
ತೀವ್ರ ಚಳಿಯಿಂದ ಪಾರಾಗಲು ಸಂತ್ರಸ್ತರಿಗೆ ಸ್ಥಳೀಯರು ದಪ್ಪನೆಯ ಹೊದಿಕೆಗಳನ್ನು ನೀಡಿದ್ದಾರೆ. ಇಲ್ಲಿ ಹಗಲಿನಲ್ಲಿ ಉಷ್ಣಾಂಶವು ಮೈನಸ್ 8 ಡಿಗ್ರಿ ಸೆಲ್ಸಿಯಸ್ ಇದ್ದು, ರಾತ್ರಿಯ ವೇಳೆ ಮೈನಸ್ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಲಿದೆ ಎಂದು ಚೀನಾದ ಹವಾಮಾನ ಇಲಾಖೆ ತಿಳಿಸಿದೆ.
ಶಿಗಾಸ್ಟೆ ಎಂಬ ಹೆಸರಿನಿಂದಲೂ ಕರೆಯುವ ಕ್ಸಿಗಾಸೆಯು ಭಾರತದ ಗಡಿಗೆ ಹತ್ತಿರದಲ್ಲಿದೆ. ಟಿಬೆಟ್‌ನ ಪವಿತ್ರ ಸ್ಥಳಗಳಲ್ಲಿ ಇದೂ ಒಂದಾಗಿದೆ. ಡಿಂಗ್ರಿ ಕೌಂಟಿಯ ತ್ಸೊಗೊ ಟೌನ್‌ಶಿಪ್ ಭೂಕಂಪದ ಕೇಂದ್ರ ಬಿಂದುವಾಗಿದ್ದು, ಈ ಪ್ರದೇಶದ 20 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 6,900 ಮಂದಿ ವಾಸಿಸುತ್ತಿದ್ದಾರೆ. 27 ಗ್ರಾಮಗಳು ಇಲ್ಲಿವೆ. ಡಿಂಗ್ರಿ ಕೌಂಟಿಯ ಒಟ್ಟು ಜನಸಂಖ್ಯೆ 61 ಸಾವಿರ ಎಂದು ಅಧಿಕೃತ ಅಂಕಿ–ಅಂಶ ತಿಳಿಸುತ್ತದೆ.
ಕಂಪನ ಕೇಂದ್ರವು 10 ಕಿ.ಮೀ ಆಳದಲ್ಲಿ ಇತ್ತು ಎಂದು ಚೀನಾದ ಭೂಕಂಪ ವಿಜ್ಞಾನ ಕೇಂದ್ರವು ತಿಳಿಸಿರುವುದಾಗಿ ಸರ್ಕಾರಿ ಸ್ವಾಮ್ಯದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೆರೆಯ ನೇಪಾಳದಲ್ಲೂ ಭೂಮಿ ಕಂಪಿಸಿದ್ದು, ಜನರು ತಮ್ಮ ಮನೆಗಳಿಂದ ಹೊರಗೆ ಓಡಿದ್ದಾರೆ. ಕಾವ್ರೆಪಲಂಚೊಕ್, ಸಿಂಧುಪಲಂಚೊಕ್ ಧಾಡಿಂಗ್ ಮತ್ತು ಸೋಲುಖುಂಬು ಜಿಲ್ಲೆಗಳಲ್ಲಿ ಕಂಪನದ ಅನುಭವ ಆಗಿದೆ.
ರಾಜಧಾನಿ ಕಾಠ್ಮಂಡುವಿನಲ್ಲಿ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದರು. ನೇಪಾಳದಲ್ಲಿ ಯಾವುದೇ ಸಾವು–ನೋವು ವರದಿಯಾಗಿಲ್ಲ ಎಂದು ನೇಪಾಳ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಎವರೆಸ್ಟ್ ಪರ್ವತಕ್ಕೆ ಸಮೀಪದಲ್ಲಿರುವ ಪರ್ವತ ಪ್ರದೇಶಗಳಲ್ಲೂ ಭೂಮಿ ಕಂಪಿಸಿದೆ.
ಸ್ಥಳೀಯ ಕಾಲಮಾನ ಬೆಳಿಗ್ಗೆ 7ರ ಬಳಿಕ ಒಂದು ಗಂಟೆಯ ಅವಧಿಯಲ್ಲಿ ರಿಕ್ಟರ್ ಮಾಪಕದಲ್ಲಿ 4ರಿಂದ 5ರಷ್ಟು ತೀವ್ರತೆಯ ಆರಕ್ಕೂ ಹೆಚ್ಚು ಕಂಪನಗಳು ಸಂಭವಿಸಿವೆ ಎಂದು ಯುಎಸ್‌ಜಿಎಸ್ ವರದಿ ತಿಳಿಸಿದೆ.
ಚೀನಾದಲ್ಲಿ 2008ರ ಬಳಿಕ ನಡೆದ ಭೂಕಂಪಗಳು...
2008 ಮೇ: ಸಿಚುವಾನ್ ಪ್ರಾಂತ್ಯದಲ್ಲಿ ಸಂಭವಿಸಿದ 7.9 ತೀವ್ರತೆಯ ಭೂಕಂಪಕ್ಕೆ ಸುಮಾರು 90 ಸಾವಿರಕ್ಕೂ ಹೆಚ್ಚು ಬಲಿ
2010 ಏಪ್ರಿಲ್: ಕ್ವಿನ್‌ಗಾಯ್ ಪ್ರಾಂತ್ಯದಲ್ಲಿ 7.1 ತೀವ್ರತೆಯ ಭೂಕಂಪ; 2698 ಸಾವು
2013 ಏಪ್ರಿಲ್: ಸಿಚುವಾನ್ ಪ್ರಾಂತ್ಯದಲ್ಲಿ 196 ಮಂದಿ ಬಲಿ; 7.0 ತೀವ್ರತೆ ದಾಖಲು
2013 ಜುಲೈ: ಗಾನ್ಸು ಪ್ರಾಂತ್ಯದಲ್ಲಿ 6.6 ತೀವ್ರತೆಯ ಭೂಕಂಪ; 95 ಸಾವು
2014 ಆಗಸ್ಟ್: ಯುನಾನ್ ಪ್ರಾಂತ್ಯದಲ್ಲಿ 617 ಮಂದಿ ಸಾವು; ತೀವ್ರತೆ 6.1 ದಾಖಲು
2022 ಸೆಪ್ಟೆಂಬರ್: ಸಿಚುವಾನ್‌ನಲ್ಲಿ 6.8 ತೀವ್ರತೆಯ ಭೂಕಂಪ; 93 ಬಲಿ
2023 ಡಿಸೆಂಬರ್: ಗಾನ್ಸು ಮತ್ತು ಕ್ವಿನ್‌ಗಾಯ್‌ನಲ್ಲಿ ಸಂಭವಿಸಿದ 6.2 ತೀವ್ರತೆಯ ಭೂಕಂಪಕ್ಕೆ 126 ಜನರ ಸಾವು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.