ADVERTISEMENT

ಇಂಡೋನೇಷ್ಯಾ: ಸುನಾಮಿ, ಭೂಕಂಪಕ್ಕೆ ಕನಿಷ್ಠ 384 ಮಂದಿ ಬಲಿ; 540 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2018, 8:46 IST
Last Updated 29 ಸೆಪ್ಟೆಂಬರ್ 2018, 8:46 IST
   

ಜಕಾರ್ತ: ಇಂಡೊನೇಷ್ಯಾದ ಸುಲಾವೇಸಿ ದ್ವೀಪದ ಪಲು ನಗರದಲ್ಲಿ ಶುಕ್ರವಾರ ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯ ಹೊಡೆತಕ್ಕೆ ಸಿಲುಕಿ ಕನಿಷ್ಠ 384ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ಪಲು ನಗರದಲ್ಲಿ ಸಾವಿರಾರು ಮನೆಗಳು ಭೂಕಂಪಿಸಿದ ಪರಿಣಾಮ ನೆಲಕ್ಕುರುಳಿವೆ ಹಾಗೂ ಅಪ್ಪಳಿಸಿದ ಸುನಾಮಿಯ ಹೊಡೆತದಲ್ಲಿ ಕೊಚ್ಚಿ ಹೋಗಿವೆ. ಮನೆಯ ಒಳಗಿದ್ದವರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರೆ, ಮನೆಯ ಹೊರಗೆ ನಿದ್ರೆಯಲ್ಲಿದ್ದರು ತೀವ್ರವಾಗಿ ಗಾಯಗೊಂಡಿದ್ದಾರೆ.

ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರರ ಪ್ರಕಾರ, ಕನಿಷ್ಠ 348ಮಂದಿ ಸಾವಿಗೀಡಾಗಿದ್ದು 540ಕ್ಕೂ ಹೆಚ್ಚು ಮಂದಿ ಗಾಯಗೊಂಡು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 29 ಮಂದಿ ನಾಪತ್ತೆಯಾಗಿದ್ದಾರೆ.

ADVERTISEMENT

(ಅಪ್ಪಳಿಸಿದ ಸುನಾಮಿ)

ರಿಕ್ಟರ್‌ ಮಾಪಕದಲ್ಲಿ 7.5ರಷ್ಟು ಭೂಕಂಪನ ತೀವ್ರತೆ ದಾಖಲಾಗಿದ್ದು, ಗರಿಷ್ಠ 1.5 ಮೀಟರ್‌ ಎತ್ತರದಷ್ಟು ಸುನಾಮಿಯ ತೀವ್ರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಪಲು ಹಾಗೂ ಮೀನುಗಾರಿಕಾ ಪ್ರದೇಶ ಡೊಂಗಲಾ ಸುತ್ತಮುತ್ತಲು ಸಂಪರ್ಕ ಸಾಧಿಸಲು ತೊಡಕಾಗಿದೆ.

ಭೂಕಂಪನದ ಕೇಂದ್ರ ಇಲ್ಲಿಂದ 27 ಕಿ.ಮೀ. ದೂರದಲ್ಲಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.