ADVERTISEMENT

ಸುಡಾನ್‌: ಉಭಯ ಸೇನಾಪಡೆ ಮಧ್ಯೆ ಮಾತುಕತೆ ಆರಂಭ

ಎಪಿ
Published 6 ಮೇ 2023, 12:19 IST
Last Updated 6 ಮೇ 2023, 12:19 IST
   

ಅಸ್ವಾನ್‌, ಈಜಿಪ್ಟ್‌: ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಕದನ ನಿಲ್ಲಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ ಬೆನ್ನಲ್ಲೇ ಸೇನಾಪಡೆ ಮತ್ತು ಅರೆಸೇನಾ ಕ್ಷಿಪ್ರ ಕಾರ್ಯಪಡೆ ಶನಿವಾರ ಮಾತುಕತೆ ಆರಂಭಿಸಿವೆ ಎಂದು ಅಮೆರಿಕ ಮತ್ತು ಸೌದಿ ಅರೇಬಿಯಾ ತಿಳಿಸಿವೆ.

ಯುದ್ಧ ಆರಂಭವಾದ ನಂತರ ಮೊದಲ ಬಾರಿಗೆ ಉಭಯ ಪಡೆಗಳು ಸೌದಿ ಅರೇಬಿಯಾದ ಜಿದ್ಧಾ ನಗರದಲ್ಲಿ ಮಾತುಕತೆ ನಡೆಸುತ್ತಿವೆ.

ಸೌದಿ ಮತ್ತು ಅಮೆರಿಕದ ರಾಜತಾಂತ್ರಿಕ ಶಿಫಾರಸಿನ ಭಾಗವಾಗಿ ಈ ಸಂಧಾನ ಮಾತುಕತೆ ನಡೆದಿದ್ದು, ಕದನ ವಿರಾಮ ಮತ್ತು ಯುದ್ಧ ಕೊನೆಗಾಣಿಸುವ ಉದ್ದೇಶದಿಂದ ಸಕ್ರಿಯವಾಗಿ ಭಾಗವಹಿಸುವಂತೆ ಉಭಯ ಪಡೆಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. 

ADVERTISEMENT

‘ಯುದ್ಧದ ಕೇಂದ್ರಗಳಾದ ಖಾರ್ಟೂಮ್ ಮತ್ತು ಅದಕ್ಕೆ ಹೊಂದಿಕೊಂಡಿರುವ ಒಮ್ಡುರ್‌ಮಾನ್‌ ನಗರದಲ್ಲಿ ಮಾನವೀಯ ಕಾರಿಡಾರ್‌ಗಳನ್ನು ತೆರೆಯುವ ಸಂಬಂಧ ಮಾತುಕತೆ ನಡೆಯುತ್ತಿದೆ’ ಎಂದು ಸೇನಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಗ್ಯ ಸೌಲಭ್ಯ ಸೇರಿದಂತೆ ನಾಗರಿಕ ಮೂಲಭೂತ ಸೌಕರ್ಯಗಳ ರಕ್ಷಣೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎಂದು ಸೇನಾಪಡೆಯ ಅಧಿಕಾರಿಯೊಬ್ಬರು ತಿಳಿಸಿದರು.

ಮೂರು ವಾರ ನಡೆದ ಯುದ್ಧದಲ್ಲಿ ರಾಜಧಾನಿ ಖಾರ್ಟೂಮ್‌ ಮತ್ತಿತರ ನಗರಗಳು ಅಕ್ಷರಶಃ ಯುದ್ಧಭೂಮಿಯಾಗಿ ಪರಿವರ್ತನೆಯಾಗಿವೆ. 550ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, 4,900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸುಡಾನ್‌ ಆರೋಗ್ಯ ಸಚಿವಾಲಯ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.