ಗುಜರಾತ್‌ನ ಮೆಹಸಾನಾ ಜಿಲ್ಲೆಯ ಜುಲಾಸಾನ್ ಗ್ರಾಮದಲ್ಲಿ ಪಟಾಕಿ ಸಿಡಿಸಿ ಗ್ರಾಮಸ್ಥರ ಸಂಭ್ರಮ
ಪಿಟಿಐ ಚಿತ್ರ
ವಡೋದರ: ಗಗನಯಾನಿ ಸುನಿತಾ ವಿಲಿಯಮ್ಸ್ ವವರು 286 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದ ನಂತರ ಬುಧವಾರ ನಸುಕಿನಲ್ಲಿ ಫ್ಲೊರಿಡಾದ ಕಡಲ ತೀರಕ್ಕೆ ಇತರ ಮೂವರು ಗಗನಯಾನಿಗಳೊಂದಿಗೆ ಸುರಕ್ಷಿತವಾಗಿ ಬಂದಿಳಿದರು. ಅವರ ಸುರಕ್ಷಿತ ಬರುವಿಕೆಯ ಹಾರೈಕೆಯಲ್ಲಿದ್ದ ಸುನಿತಾ ಅವರ ಪೂರ್ವಜರ ಊರಾದ ಗುಜರಾತ್‌ನ ಮೆಹಸಾನಾ ಜಿಲ್ಲೆಯಲ್ಲಿ ಸಂಭ್ರಮವೇ ಮನೆ ಮಾಡಿದೆ.
ಪಟಾಕಿಗಳು ಸಿಡಿಸಿ, ಸಿಹಿ ಹಂಚುವ ಮೂಲಕ ದೀಪಾವಳಿ ಹಬ್ಬದಂತೆಯೇ ಜನರು ಸಂಭ್ರಮಾಚರಿಸಿದ್ದಾರೆ. ಗ್ರಾಮದ ದೇವಾಲಯದ ಬಳಿ ಸೇರಿದ ಜನರು ಟಿ.ವಿ. ಪರದೆಯಲ್ಲಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಹಾಗೂ ಅವರೊಂದಿಗೆ ಇತರ ಇಬ್ಬರು ಗಗನಯಾನಿಗಳನ್ನು ಹೊತ್ತು ತಂದ ಸ್ಪೇಸ್ ಎಕ್ಸ್‌ನ ಕ್ಯಾಪ್ಸೂಲ್ ಸುರಕ್ಷಿತವಾಗಿ ಕಡಲಲ್ಲಿ ಇಳಿಯುವುದನ್ನು ಕಂಡು ಸಂಭ್ರಮಿಸಿದರು. ‘ಹರ್ ಹರ್ ಮಹಾದೇವ್’ ಎಂದು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.
ಸುಮಾರು ಒಂಭತ್ತು ತಿಂಗಳಿಂದ ತಾಂತ್ರಿಕ ಸಮಸ್ಯೆಯಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಉಳಿದಿದ್ದ ಸುನಿತಾ ವಿಲಿಯಮ್ಸ್ ಅವರ ತಂದೆ ದೀಪಕ್ ಪಾಂಡ್ಯಾ ಅವರು ಇದೇ ಗ್ರಾಮದ ಜುಲಾಸನ್ ಕುಟುಂಬಕ್ಕೆ ಸೇರಿದವರು.
ತಂದೆ ದೀಪಕ್ ಪಾಂಡ್ಯಾ ಹಾಗೂ ತಾಯಿ ಉರ್ಸುಲಿನ್ ಬೊನ್ನಿ ಝಲೊಕಾರ್ ಜತೆ ಸುನಿತಾ ಹಾಗೂ ಸೋದರಿ
ದೀಪಕ್ ಪಾಂಡ್ಯಾ ಅವರು 1953ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಇಂಟರ್‌ಮಿಡಿಯೇಟ್ ಸೈನ್ಸ್ ಪೂರ್ಣಗೊಳಿಸಿದರು. ನಂತರ ಅಮೆರಿಕದ ಒಹಿಯೊದ ಕ್ಲೆವ್‌ಲ್ಯಾಂಡ್‌ನಲ್ಲಿ ವೈದ್ಯಕೀಯ ವಿಜ್ಞಾನ ವಿಷಯದಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಿದರು. ನಂತರ 1964ರಲ್ಲಿ ವೆಸ್ಟರ್ನ್ ರಿಸರ್ವ್ ವಿಶ್ವವಿದ್ಯಾಲಯದಲ್ಲಿ ಶರೀರಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅಮೆರಿಕದ ಹಲವು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಗಳಲ್ಲಿ ದೀಪಕ್ ಕೆಲಸ ಮಾಡಿದ್ದಾರೆ.
1957ರಲ್ಲೇ ಪಾಂಡ್ಯಾ ಅವರು ಅಮೆರಿಕದಲ್ಲಿ ನೆಲೆಸಿರುವ ಸ್ಲೊವೆನಿಯಾ ಮೂಲದ ಉರ್ಸುಲಿನ್ ಬೊನ್ನಿ ಝಲೊಕಾರ್ ಅವರನ್ನು ವಿವಾಹವಾದರು.
ಸುನಿತಾ ಅವರು 20 ವರ್ಷಗಳ ಹಿಂದೆ ಮೈಕಲ್ ವಿಲಿಯಮ್ಸ್ ಅವರನ್ನು ವಿವಾಹವಾದರು. ಫೆಡರಲ್ ಮಾರ್ಷಲ್ ಆದ ಅವರೂ ಹೆಲಿಕಾಪ್ಟರ್ ಪೈಲೆಟ್ ವೃತ್ತಿಯವರು.
ಸುನಿತಾ ಅವರ ತಾಯಿ ಕೆಲ ದಿನಗಳ ಹಿಂದೆ ಸಂದರ್ಶನ ನೀಡಿ, ‘ಸುನಿತಾ ಏನು ಇಷ್ಟಪಡುತ್ತಿದ್ದಳೋ ಅದನ್ನು ಮಾಡುತ್ತಿದ್ದಾಳೆ. ಅಂತರರಾಷ್ಟ್ರೀಯ ಬಾಹ್ಯಾಕಾಶದಲ್ಲಿ ಹೆಚ್ಚು ದಿನ ಕಳೆಯುತ್ತಿದ್ದಾಳೆ ಎಂದು ಹೇಗೆ ಬೆಸರ ಪಟ್ಟುಕೊಳ್ಳಲಿ. ಅವಳ ಬಗ್ಗೆ ಖುಷಿ ಮತ್ತು ಹೆಮ್ಮೆ ಇದೆ’ ಎಂದಿದ್ದರು.
ವಿಲಿಯಮ್ಸ್ ಕೂಡಾ ಪ್ರತಿಕ್ರಿಯಿಸಿ, ‘ಬಾಹ್ಯಾಕಾಶ ಸುನಿತಾ ಅವರ ಸಂತೋಷದ ಸ್ಥಳ’ ಎಂದಿದ್ದರು.
ಸುನಿತಾ ಸೋದರ ಸಂಬಂಧಿ ನವೀನ್ ಪಾಂಡ್ಯಾ ಅವರು ಪ್ರತಿಕ್ರಿಯಿಸಿ, ‘ಒಂಬತ್ತು ತಿಂಗಳ ಹಿಂದೆ ಬಾಹ್ಯಾಕಾಶಕ್ಕೆ ಹೋದ ದಿನದಿಂದ ಮರಳಿ ಬರುವವರೆಗೂ ಗ್ರಾಮದ ದೇವಾಲಯದಲ್ಲಿ ‘ಅಖಂಡ ಜ್ಯೋತಿ’ ಬೆಳಗಲಾಗುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.