ADVERTISEMENT

ನೈಜೀರಿಯಾದಲ್ಲಿ ಶಂಕಿತ ಉಗ್ರರ ದಾಳಿ: 40 ಭತ್ತದ ಬೆಳೆಗಾರರ ಹತ್ಯೆ

ಬೊರ್ನೊ ರಾಜ್ಯದಲ್ಲಿ ನಡೆದ ಘಟನೆ; ಸಾವಿನ ಸಂಖ್ಯೆ ಏರುವ ಸಾಧ್ಯತೆ

ಏಜೆನ್ಸೀಸ್
Published 29 ನವೆಂಬರ್ 2020, 12:07 IST
Last Updated 29 ನವೆಂಬರ್ 2020, 12:07 IST
ನೈಜೀರಿಯಾದ ಬೊರ್ನೊ ರಾಜ್ಯದ ಝಬಾರ್‌ಮರಿಯಲ್ಲಿ ಶಂಕಿತ ಉಗ್ರಗಾಮಿಗಳ ಗುಂಡಿನ ದಾಳಿಯಿಂದ ಸಾವನ್ನಪ್ಪಿದ ಭತ್ತದ ರೈತರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆಗೆ ಸಿದ್ದತೆಗೊಳಿಸುತ್ತಿರುವ ದೃಶ್ಯ
ನೈಜೀರಿಯಾದ ಬೊರ್ನೊ ರಾಜ್ಯದ ಝಬಾರ್‌ಮರಿಯಲ್ಲಿ ಶಂಕಿತ ಉಗ್ರಗಾಮಿಗಳ ಗುಂಡಿನ ದಾಳಿಯಿಂದ ಸಾವನ್ನಪ್ಪಿದ ಭತ್ತದ ರೈತರ ಪಾರ್ಥಿವ ಶರೀರಗಳನ್ನು ಅಂತ್ಯಕ್ರಿಯೆಗೆ ಸಿದ್ದತೆಗೊಳಿಸುತ್ತಿರುವ ದೃಶ್ಯ   

ಮೈದ್ಗುರಿ: ನೈಜೀರಿಯಾದ ಉತ್ತರ ಬೊರ್ನೊ ರಾಜ್ಯದ ಗದ್ದೆಗಳಲ್ಲಿ ಭತ್ತ ಕಟಾವು ಮಾಡುತ್ತಿದ್ದ 40 ರೈತರನ್ನು ಹಾಗೂ ಮೀನುಗಾರರನ್ನು ಶಂಕಿತ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ.

ಇಸ್ಲಾಮಿಕ್‌ ಉಗ್ರಗಾಮಿ ತಂಡದ ಬೊಕೊ ಹರಮ್‌ ಗುಂಪಿಗೆ ಸೇರಿದವರು ಈ ಕೃತ್ಯ ಎಸಗಿದ್ದಾರೆ.

ಉತ್ತರ ಬೊರ್ನೊ ರಾಜ್ಯದ ಗರಿನ್‌–ಕ್ವಾಶೆಬೆಯ ಗದ್ದೆಯಲ್ಲಿ ಶನಿವಾರ ರೈತರು ಭತ್ತ ಕಟಾವು ಮಾಡುತ್ತಿದ್ದ ವೇಳೆ ಅವರನ್ನು ಸುತ್ತುವರಿದ ಶಸ್ತ್ರಸಜ್ಜಿತ ಉಗ್ರಗಾಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ. ಬೊರ್ನೊ ರಾಜ್ಯದ ಭತ್ತ ಬೆಳೆಗಾರರ ಸಂಘದ ಮುಖಂಡ ಮಲಮ್ ಝಬಾರ್‌ಮರಿ ಅವರು ಈ ಘಟನೆಯನ್ನು ಖಚಿತಪಡಿಸಿದ್ದಾರೆ.

ADVERTISEMENT

‘ಗರಿನ್‌ –ಕ್ವಾಶೆಬೆ ಭತ್ತದ ಗದ್ದೆಗಳಲ್ಲಿ ಶನಿವಾರ ಮಧ್ಯಾಹ್ನಝಬಾರ್‌ಮರಿ ಸಮುದಾಯದ ರೈತರು ಬೆಳೆ ಕಟಾವು ಮಾಡುತ್ತಿದ್ದಾಗ, ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. 60ಕ್ಕೂ ಹೆಚ್ಚು ರೈತರ ಮೇಲೆ ದಾಳಿ ನಡೆದಿದೆ. ಇಲ್ಲಿವರೆಗೆ 44 ಮೃತದೇಹಗಳು ಸಿಕ್ಕಿವೆ. ಮೃತರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದೇವೆ' ಎಂದು ಮೆಂಬರ್‌ ಆಫ್‌ ದಿ ಹೌಸ್ ಆಫ್ ರೆಂಪ್ರೆಸೆಂಟೆಟಿವ್ಸ್‌ ಅಹಮದ್ ಸತೋಮಿ ಹೇಳಿದ್ದಾರೆ.

ನೈಜೀರಿಯಾ ಅಧ್ಯಕ್ಷ ಮೊಹಮದ್‌ ಬುಹಾರಿ ಘಟನೆಗೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ‘ಈ ಹತ್ಯೆಯನ್ನು ಖಂಡಿಸುತ್ತೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಇಂಥ ಸಂದರ್ಭದಲ್ಲಿ ಮೃತಪಟ್ಟ ರೈತರ ಕುಟುಂಬದವರ ದುಃಖದಲ್ಲಿ ನಾವು ಭಾಗಿಗಳಾಗಿದ್ದೇವೆ. ಅವರ ಬೆಂಬಲಕ್ಕೆ ನಿಲ್ಲುತ್ತೇವೆ' ಎಂದು ಹೇಳಿದ್ದಾರೆ. 'ದೇಶದ ನಾಗರಿಕರನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಸಶಸ್ತ್ರಪಡೆಗಳಿಗೆ ಎಲ್ಲ ಬೆಂಬಲ ನೀಡಿದೆ' ಎಂದು ಬುಹಾರಿ ತಿಳಿಸಿದರು.

ಫೆಡರಲ್ ಶಾಸಕರೊಬ್ಬರ ಪ್ರಕಾರ 'ಬೊಕೊ ಹರಾಮ್ ಗುಂಪಿನ ಒಬ್ಬ ಸದಸ್ಯನನ್ನು ಈ ರೈತರು ಬಂಧಿಸಿ, ಭದ್ರತಾ ಪಡೆಗೆ ಒಪ್ಪಿಸಿದ ಪರಿಣಾಮವಾಗಿ, ಸೇಡು ತೀರಿಸಿಕೊಳ್ಳಲು ಆ ಉಗ್ರಗಾಮಿಗಳ ತಂಡ ರೈತರನ್ನು ಕೊಂದು ಹಾಕಿದೆ'.

‘ಬೊಕೊ ಹರಾಮ್‌ ಗುಂಪಿನ ಬಂದೂಕುಧಾರಿ ಸದಸ್ಯನೊಬ್ಬ ಗದ್ದೆಯಲ್ಲಿದ್ದ ರೈತರಿಗೆ ಹಣ ಕೊಡುವಂತೆ ಹಾಗೂ ತನಗೆ ಅಡುಗೆ ಮಾಡಿಕೊಂಡುವಂತೆ ಕಿರುಕುಳ ನೀಡುತ್ತಿದ್ದ. ಈತನ ಕಾಟದಿಂದ ಬೇಸತ್ತ ರೈತರು, ಊಟಕ್ಕಾಗಿ ಕಾಯ್ದು ಕುಳಿತಿದ್ದ ಆ ಬಂದೂಕುಧಾರಿ ಮೇಲೆ ಮುಗಿಬಿದ್ದು, ರೈಫಲ್ ಕಸಿದುಕೊಂಡು ಅವನನ್ನು ಕಟ್ಟಿ ಹಾಕಿದರು. ನಂತರ ಆತನನ್ನು ಭದ್ರತಾ ಸಿಂಬ್ಬಂದಿಗೆ ಒಪ್ಪಿಸಿದರು. ಇದಕ್ಕೆ ಪ್ರತೀಕಾರವಾಗಿ ಬೊಕೊ ಹರಾಮ್‌ ಗುಂಪಿನ ಭಯೋತ್ಪಾದಕರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರ ಮೇಲೆ ದಾಳಿ ಮಾಡಿದರು. ಹೊರಡುವ ಮುನ್ನ ಭತ್ತದ ಗದ್ದೆಗಳಿಗೆ ಬೆಂಕಿ ಹಂಚಿದರು' ಎಂದು ಘಟನೆಯನ್ನು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.