
ಬೀಜಿಂಗ್/ ಟೋಕಿಯೊ: ತೈವಾನ್ ವಿಚಾರದಲ್ಲಿ ಜಪಾನ್ ಪ್ರಧಾನಿ ಸನೇ ತಕೈಚಿ ಅವರು ಚೀನಾದ ಬಗ್ಗೆ ನೀಡಿದ ಹೇಳಿಕೆ ಕುರಿತು ಅಮೆರಿಕವು ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದೆ.
‘ಎರಡು ರಾಷ್ಟ್ರಗಳ ನಡುವಿನ ಮೈತ್ರಿಕೂಟಕ್ಕೆ ತನ್ನ ಅಚಲ ಬೆಂಬಲವಿದೆ’ ಎಂದು ತಿಳಿಸಿದೆ.
‘ತೈವಾನ್ ತನ್ನ ಭೂಪ್ರದೇಶ ಎಂದು ಹೇಳಿಕೊಂಡು ಚೀನಾ ಅದರ ಮೇಲೆ ದಾಳಿ ನಡೆಸಿದರೆ, ಆಗ ಜಪಾನ್ ಮಿಲಿಟರಿ ಹಸ್ತಕ್ಷೇಪಕ್ಕೆ ಮುಂದಾಗಬಹುದು’ ಎಂದು ತಕೈಚಿ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿತ್ತು. ನ.18ರಂದು ಬೀಜಿಂಗ್‌ನಲ್ಲಿರುವ ಜಪಾನ್‌ನ ರಾಯಭಾರಿ ಎದುರು ಆಕ್ಷೇಪ ದಾಖಲಿಸಿದ್ದ ಚೀನಾ, ‘ತಕೈಚಿ ತಕ್ಷಣವೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿತ್ತು.
ಜಪಾನ್ ವಿದೇಶಾಂಗ ಸಚಿವ ತೊಶಿಮಿಟ್ಸು ಮೊಟೆಗಿ ಜೊತೆಗಿನ ಸಭೆಯ ಬಳಿಕ ಮಾತನಾಡಿದ ಜಪಾನ್‌ನ ಅಮೆರಿಕ ರಾಯಭಾರಿ ಜಾರ್ಜ್ ಗ್ಲಾಸ್, ‘ತಕೈಚಿ ಹೇಳಿಕೆಗೆ ಚೀನಾವು ನೀಡಿದ ಪ್ರತಿಕ್ರಿಯೆಯು ಪ್ರಚೋದನಕಾರಿಯಾಗಿದೆ’ ಎಂದು ತಿಳಿಸಿದ್ದಾರೆ.
‘ಚೀನಾದ ನಡೆಯು ಅಸಹಾಯಕತೆ ಹಾಗೂ ಪ್ರಾದೇಶಿಕ ಸ್ಥಿರತೆಯನ್ನು ಹಾಳುಮಾಡುವ ಉದ್ದೇಶವನ್ನು ಹೊಂದಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.