ADVERTISEMENT

ತೈವಾನ್ ಸಂಘರ್ಷ ಶಮನಕ್ಕೆ ಭಾರತ ಕರೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 16:29 IST
Last Updated 12 ಆಗಸ್ಟ್ 2022, 16:29 IST
   

ನವದೆಹಲಿ: ಚೀನಾ– ತೈವಾನ್‌ ನಡುವಿನ ಬಿಕ್ಕಟ್ಟಿನ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಭಾರತವು,ತೈವಾನ್ ಕೇಂದ್ರಿತ ಬೆಳವಣಿಗೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಪ್ರದೇಶದಲ್ಲಿ ಯಥಾಸ್ಥಿತಿ ಬದಲಾಯಿಸಲು ಏಕಪಕ್ಷೀಯ ಕ್ರಮಕೈಗೊಳ್ಳಬಾರದು ಎಂದು ಶುಕ್ರವಾರ ಒತ್ತಾಯಿಸಿದೆ.

ಇತರ ಹಲವು ರಾಷ್ಟ್ರಗಳಂತೆಯೇ ಭಾರತ ಕೂಡ ತೈವಾನಿನ ಇತ್ತೀಚಿನ ಬೆಳವಣಿಗೆಗಳಿಗೆ ಕಳವಳ ವ್ಯಕ್ತಪಡಿಸಿದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ನಿರಂತರ ಪ್ರಯತ್ನ ನಡೆಸುವ ಅಗತ್ಯವನ್ನು ಭಾರತ ಒತ್ತಿ ಹೇಳಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಹೇಳಿದ್ದಾರೆ.

ಉದ್ವಿಗ್ನತೆ ಶಮನಕ್ಕೆ ಮತ್ತು ಶಾಂತಿ– ಸ್ಥಿರತೆಗಾಗಿ ಪ್ರಯತ್ನಿಸಬೇಕು.ಈ ಪ್ರದೇಶದ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿಬದಲಿಸುವ ಪ್ರಯತ್ನಕ್ಕೆ ಮುಂದಾಗಬಾರದು. ಸೇನಾ ತಾಲೀಮಿನಲ್ಲಿ ಸಂಯಮ ಮೀರಬಾರದು ಎಂದು ಒತ್ತಾಯಿಸಿರುವುದಾಗಿ ಅವರು ಹೇಳಿದ್ದಾರೆ.

ADVERTISEMENT

ತೈವಾನ್‌ ಜಲಸಂಧಿ ದಾಟಿದ 10 ಚೀನಿ ಯುದ್ಧ ವಿಮಾನಗಳು

ತೈಪೆ: ತೈವಾನ್‌ ದ್ವೀಪಕ್ಕೆ ಸೇರಿದ ಜಲಸಂಧಿಯ ವಾಯು ಪ್ರದೇಶದಲ್ಲಿ ಶುಕ್ರವಾರ ಚೀನಾದ 10 ಯುದ್ಧ ವಿಮಾನಗಳನ್ನು ಹಾರಾಟ ನಡೆಸಿವೆ.

ಚೀನಾ ಮತ್ತು ತೈವಾನ್‌ ದ್ವೀ‍ಪ ಪ್ರತ್ಯೇಕಿಸುವ ಅಘೋಷಿತ ಗಡಿ ರೇಖೆಯ ಜಲಸಂಧಿಯನ್ನು ದಾಟಿ ಯುದ್ಧ ವಿಮಾನಗಳು ಹಾರಾಟ ನಡೆಸಿರುವುದನ್ನುತೈವಾನ್‌ ರಕ್ಷಣಾ ಸಚಿವಾಲಯವೂ ದೃಢಪಡಿಸಿದೆ.

ಚೀನಾವು ತನ್ನದೇ ಭೂಭಾಗವೆಂದು ವಾದಿಸುತ್ತಿರುವ ತೈವಾನ್‌ ದ್ವೀಪಕ್ಕೆ ಅಮೆರಿಕ ಸಂಸತ್‌ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ಕಳೆದ ವಾರ ಭೇಟಿ ನೀಡಿದ್ದನ್ನು ವಿರೋಧಿಸಿ, ಪ್ರತೀಕಾರವಾಗಿ ದ್ವೀಪದ ಸುತ್ತಲೂ ಕಳೆದ ವಾರದಿಂದ ಭಾರಿ ಸೇನಾ ತಾಲೀಮು ನಡೆಸುತ್ತಿದೆ. ತೈವಾನ್‌ ವಾಯು ಪ್ರದೇಶವನ್ನು ಚೀನಿ ಯುದ್ಧ ವಿಮಾನಗಳು ಪದೇ ಪದೇ ಉಲ್ಲಂಘಿಸಿ ಹಾರಾಟ ನಡೆಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.