ADVERTISEMENT

ಸರ್ಕಾರ ಸೇರಿ: ಮಹಿಳೆಯರಿಗೆ ಆಹ್ವಾನ ನೀಡಿದ ತಾಲಿಬಾನ್

ಏಜೆನ್ಸೀಸ್
Published 17 ಆಗಸ್ಟ್ 2021, 19:45 IST
Last Updated 17 ಆಗಸ್ಟ್ 2021, 19:45 IST
ಮೌಲಾವಿ ಹಿಬಾತುಲ್ಲಾ ಅಖುಂಜಾದಾ
ಮೌಲಾವಿ ಹಿಬಾತುಲ್ಲಾ ಅಖುಂಜಾದಾ   

ಕಾಬೂಲ್‌: ಮಹಿಳೆಯರ ಬಗೆಗಿನ ನಿಲುವು ಬದಲಾಗಿದೆ ಎಂಬ ಸಂದೇಶವನ್ನು ನೀಡಲು ತಾಲಿಬಾನ್‌ ಬಯಸಿದೆ. ಅದಕ್ಕಾಗಿ, ತಮ್ಮ ಸರ್ಕಾರಕ್ಕೆ ಮಹಿಳೆಯರೂ ಸೇರಬೇಕು ಎಂಬ ಆಹ್ವಾನ ನೀಡಿದೆ.

ತಾಲಿಬಾನ್‌ ಆಡಳಿತ ಹೇಗಿರಲಿದೆ ಎಂಬುದರ ಬಗ್ಗೆ ಮೊದಲ ಪ್ರತಿಕ್ರಿಯೆಯಾಗಿ, ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಸದಸ್ಯ ಇನಾಂಉಲ್ಲಾ ಸಮಂಗಾನಿ ಈ ಹೇಳಿಕೆ ನೀಡಿದ್ದಾರೆ. ಆದರೆ, ದೇಶದಲ್ಲಿ ತಾಲಿಬಾನ್‌ ಆಡಳಿತ ಯಾವ ರೀತಿ ಇರುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಮಹಿಳೆಯರು ಸಂತ್ರಸ್ತರಾಗುವುದನ್ನು ಇಸ್ಲಾಮಿಕ್‌ ಎಮಿರೇಟ್‌ ಬಯಸುವುದಿಲ್ಲ. ಷರಿಯಾ ಕಾನೂನಿನ ಅಡಿಯಲ್ಲಿ ಮಹಿಳೆಯರೂ ಸರ್ಕಾರದಲ್ಲಿ ಇರಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ತಾಲಿಬಾನ್‌ ಆಡಳಿತದಲ್ಲಿ ತಾವು ಯಾವೆಲ್ಲ ಕಾನೂನುಗಳನ್ನು ಪಾಲಿಸಬೇಕೆಂಬುದು ಅಲ್ಲಿನ ಜನರಿಗೆ ಗೊತ್ತಿದೆ. ಆದರೆ, ಅವರು ಷರಿಯಾ, ಇಸ್ಲಾಮಿಕ್‌,ಕಾನೂನು ಎಂದರೇನು ಸ್ಪಷ್ಟವಾಗಿ ಏನು ಎಂಬುದನ್ನು ವಿವರಿಸಿಲ್ಲ. ಸರ್ಕಾರದಲ್ಲಿ ‘ಎಲ್ಲರೂ ಭಾಗಿಯಾಗಬೇಕು’ ಎಂದಷ್ಟೇ ಹೇಳಿದ್ದಾರೆ.

ತಾಲಿಬಾನ್‌ನ ಪ್ರತಿಜ್ಞೆಗಳನ್ನು ನೆನಪಿಸಿಕೊಂಡಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ವಕ್ತಾರ ರೂಪರ್ಟ್‌ ಕಾಲ್‌ವಿಲ್ಲೆ, ತಾಲಿಬಾನ್‌ ಆಡಳಿತದ ಅವಧಿಯಲ್ಲಿ ಅವುಗಳು ಜಾರಿಯಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.‌

‘ಇಂಥದೊಂದು ಭರವಸೆಯನ್ನು ಗೌರವಿಸಲೇಬೇಕು. ಆದರೆ, ತಾಲಿಬಾನ್‌ ಪಡೆಯ ಇತಿಹಾಸ ಗೊತ್ತಿರುವುದರಿಂದ ಅದರ ಈ ಹೇಳಿಕೆಯನ್ನು ಸಂಶಯದಿಂದಲೇ ನೋಡಬೇಕಾಗುತ್ತದೆ. ಆದರೆ, ಅಲ್ಲಿನ ಜನರ ಹಕ್ಕುಗಳನ್ನು ರಕ್ಷಿಸಬೇಕಾಗಿದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಾಹಿನಿಯ ಕಾರ್ಯಕ್ರಮ ನಿರೂಪಕಿಯೊಬ್ಬರು, ತಾಲಿಬಾನ್‌ ಅಧಿಕಾರಿಯೊಬ್ಬರನ್ನು ಸ್ಟುಡಿಯೊದಲ್ಲಿ ಮಂಗಳವಾರ ಸಂದರ್ಶನ ಮಾಡಿದ್ದು ಗಮನ ಸೆಳೆದಿದೆ. ಈ ಮಧ್ಯೆ, ಕಾಬೂಲ್‌ನಲ್ಲಿ ಹಿಜಾಬ್‌ನಲ್ಲಿರುವ ಮಹಿಳೆಯರು ಪ್ರತಿಭಟನೆ ನಡೆಸಿದ್ದು, ‘ಮಹಿಳೆಯರನ್ನು ತೊಡೆದುಹಾಕದಿರಿ’ ಎಂಬ ಫಲಕಗಳನ್ನು ಪ್ರದರ್ಶಿಸಿದ್ದಾರೆ.

ಅಫ್ಗನ್‌ನ ಮಾಜಿ ಅಧ್ಯಕ್ಷ ಹಮೀದ್‌ ಕರ್ಜೈ, ಅಬ್ದುಲ್ಲಾ ಅಬ್ದುಲ್ಲಾ ಸೇರಿದಂತೆ ಸರ್ಕಾರಿ ಅಧಿಕಾರಿಗಳೊಂದಿಗೆ ತಾಲಿಬಾನ್‌ ಮಂಗಳವಾರವೂ ಮಾತುಕತೆ ಮುಂದುವರಿಸಿದೆ. 20 ವರ್ಷಗಳಲ್ಲಿ ಬದಲಾವಣೆ ಕಂಡಿರುವ ದೇಶದಲ್ಲಿ, ತಾಲಿಬಾನ್‌ ನೇತೃತ್ವದ ಸರ್ಕಾರದ ಕಾರ್ಯವಿಧಾನ ಯಾವ ರೀತಿ ಇರಬೇಕು ಎಂಬುದರ ಬಗ್ಗೆ ಚರ್ಚೆಯು ಕೇಂದ್ರೀಕೃತವಾಗಿದೆ ಎನ್ನಲಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.