ADVERTISEMENT

ಕಂದಹಾರ್, ಹೆರಾತ್‌ನ ಭಾರತೀಯ ದೂತಾವಾಸ ಕಚೇರಿಗಳಿಂದ ದಾಖಲೆ ಹೊತ್ತೊಯ್ದ ತಾಲಿಬಾನ್

ಡೆಕ್ಕನ್ ಹೆರಾಲ್ಡ್
Published 20 ಆಗಸ್ಟ್ 2021, 9:36 IST
Last Updated 20 ಆಗಸ್ಟ್ 2021, 9:36 IST
ಸಾಂದರ್ಭಿಕ ಚಿತ್ರ – ಎಪಿ
ಸಾಂದರ್ಭಿಕ ಚಿತ್ರ – ಎಪಿ   

ಕಾಬೂಲ್: ಅಫ್ಗಾನಿಸ್ತಾನದ ಕಂದಹಾರ್ ಮತ್ತು ಹೆರಾತ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗಳಲ್ಲಿ ತಾಲಿಬಾನಿಗಳು ಶೋಧ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂದು ಮೂಲಗಳು ಹೇಳಿವೆ.

ನುಸುಳುಕೋರರು ಕಚೇರಿ ಕಟ್ಟಡದೊಳಕ್ಕೆ ನುಗ್ಗಿದ್ದು ಮಾತ್ರವಲ್ಲದೆ, ಹೊರಗಡೆ ನಿಲುಗಡೆ ಮಾಡಲಾಗಿದ್ದ ವಾಹನಗಳನ್ನೂ ವಶಕ್ಕೆ ಪಡೆದಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಭಾರತವು ಅಫ್ಗಾನಿಸ್ತಾನದಲ್ಲಿ ನಾಲ್ಕು ದೂತಾವಾಸ ಕಚೇರಿಗಳನ್ನು ಹೊಂದಿದೆ. ಕಂದಹಾರ್, ಹೆರಾತ್, ಮಜರ್–ಇ–ಶರೀಫ್‌ನಲ್ಲಿರುವ ಈ ಕಚೇರಿಗಳನ್ನು ಆಗಸ್ಟ್ 15ರಂದು ಕಾಬೂಲ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಮುಚ್ಚಲಾಗಿತ್ತು.

ಅಫ್ಗಾನಿಸ್ತಾನದಲ್ಲಿನ ಬಿಕ್ಕಟ್ಟಿನ ಕಾರಣದಿಂದ ರಾಯಭಾರ ಕಚೇರಿ ಸಿಬ್ಬಂದಿ, ಐಟಿಬಿಪಿ ಸಿಬ್ಬಂದಿಯೂ ಸೇರಿದಂತೆ 120 ಭಾರತೀಯರನ್ನು ಮಂಗಳವಾರ ಭಾರತೀಯ ವಾಯುಪಡೆ ವಿಮಾನದಲ್ಲಿ ಸ್ವದೇಶಕ್ಕೆ ಕರೆದೊಯ್ಯಲಾಗಿತ್ತು.

ಉಳಿದ ಭಾರತೀಯರನ್ನೂ ವಾಪಸ್ ಕರೆಸಿಕೊಳ್ಳಲು ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಭದ್ರತಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ವೇಗವಾಗಿ ಅಫ್ಗಾನಿಸ್ತಾನದಿಂದ ಭಾರತೀಯರ ತೆರವು ಕಾರ್ಯಾಚರಣೆ ನಡೆಸುವಂತೆಯೂ ಅಫ್ಗಾನಿಸ್ತಾನದ ಅಗತ್ಯ ಇರುವ ನಾಗರಿಕರಿಗೆ ನೆರವು ನೀಡುವಂತೆಯೂ ಪ್ರಧಾನಿಯವರು ಅಧಿಕಾರಿಗಳಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.