ADVERTISEMENT

ಕಾಬೂಲ್‌ ಏರ್‌ಪೋರ್ಟ್ ಮೇಲೆ ಹಿಡಿತ ಸಾಧಿಸುತ್ತಿರುವ ತಾಲಿಬಾನ್: ಪೆಂಟಗನ್

ಪಿಟಿಐ
Published 26 ಆಗಸ್ಟ್ 2021, 3:25 IST
Last Updated 26 ಆಗಸ್ಟ್ 2021, 3:25 IST
ಕಾಬೂಲ್‌ ಏರ್‌ಪೋರ್ಟ್: ಎಎಫ್‌ಪಿ ಚಿತ್ರ
ಕಾಬೂಲ್‌ ಏರ್‌ಪೋರ್ಟ್: ಎಎಫ್‌ಪಿ ಚಿತ್ರ    

ವಾಷಿಂಗ್ಟನ್: ಕಾಬೂಲ್ ವಿಮಾನ ನಿಲ್ದಾಣದ ಪ್ರವೇಶ ಮತ್ತು ನಿಯಂತ್ರಣದ ಮೇಲೆ ತಾಲಿಬಾನ್ ಹಿಡಿತ ಸಾಧಿಸುತ್ತಿದೆ ಎಂದು ಅಮೆರಿಕದ ಭದ್ರತಾ ಪ್ರಧಾನ ಕಚೇರಿ ಪೆಂಟಗನ್ ಹೇಳಿದೆ.

ವಿದೇಶಗಳ ಜನರನ್ನು ವಾಪಸ್ ಕರೆದೊಯ್ಯಲು ಅಫ್ಗಾನಿಸ್ತಾನದಲ್ಲಿರುವ ಏಕೈಕ ಮಾರ್ಗ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.

‘ತಾಲಿಬಾನ್‌ಗಳು ಚೆಕ್‌ಪೋಸ್ಟ್‌ಗಳಲ್ಲಿ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ನಿನ್ನೆಯ ಸಂಖ್ಯೆಗಿಂತ ಎರಡು ಪಟ್ಟು ಭದ್ರತಾ ಸಿಬ್ಬಂದಿ ಹೆಚ್ಚಾಗಿದ್ದಾರೆ. ವಿಮಾನ ನಿಲ್ದಾಣ ಸೇರಿದಂತೆ ನಗರದಲ್ಲಿ ಹಿಡಿತ ಸಾಧಿಸುವುದು ಅವರ ಸ್ಪಷ್ಟ ಉದ್ಧೇಶವಾಗಿದೆ’ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿರ್ಬಿ, ಆಗಸ್ಟ್ 31 ರ ನಂತರ, ಕಾಬೂಲ್ ವಿಮಾನ ನಿಲ್ದಾಣವನ್ನು ನಿರ್ವಹಿಸುವುದು ಅಮೆರಿಕದ ಜವಾಬ್ದಾರಿಯಲ್ಲ ಎಂದಿದ್ದಾರೆ.

ಅಮೆರಿಕದ ರಾಯಭಾರ ಕಚೇರಿಯು ಪ್ರಸ್ತುತ ಕಾಬೂಲ್ ವಿಮಾನ ನಿಲ್ದಾಣದಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. ನಮ್ಮ ಬಳಿಕ, ವಿಮಾನ ನಿಲ್ದಾಣವನ್ನು ನಿರ್ವಹಿಸುವ ಹೊಣೆ ತಾಲಿಬಾನ್‌ಗೆ ಸೇರಿದ್ಧಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ನಾನು ಅವರ ಉದ್ದೇಶಗಳು ಏನೆಂಬುದರ ಬಗ್ಗೆ ಖಚಿತವಾಗಿ ಹೇಳಲಾರೆ. ಆದರೆ, ಮಿಷನ್ ಮುಗಿದ ಬಳಿಕ ನಾವು ಹೊರಡುವಾಗ ವಿಮಾನ ನಿಲ್ದಾಣದ ನಿರ್ವಹಣೆ ಅಮೆರಿಕದ ಜವಾಬ್ದಾರಿಯಾಗುವುದಿಲ್ಲ. ಅಂತರರಾಷ್ಟ್ರೀಯ ಸಮುದಾಯಗಳ ಜೊತೆ ಅದು ಹೇಗೆ ಮುಂದುವರಿಯುತ್ತದೆ ಎನ್ನುವುದನ್ನು ತಾಲಿಬಾನ್‌ಗಳು ನಿರ್ಧರಿಸಬೇಕು’ ಎಂದು ಕಿರ್ಬಿ ಹೇಳಿದರು.

‘ತಾಲಿಬಾನ್ ಕಮಾಂಡರ್‌ಗಳ ಜೊತೆ ನಿತ್ಯ ಸಂವಹನ ನಡೆಯುತ್ತದೆ. ನಾವು ಯಾರನ್ನು ಹೊರ ಹೋಗಲು ಅವಕಾಶ ನೀಡುತ್ತೇವೆ ಎಂದು ತಾಲಿಬಾನ್‌ನೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ. ಈ ಪ್ರಕ್ರಿಯೆಯ ಪ್ರತಿಯೊಂದು ಹೆಜ್ಜೆಯೂ ನಮ್ಮ ನಿಯಂತ್ರಣದಲ್ಲಿಲ್ಲ. ಕೆಲವೊಮ್ಮೆ ನಮ್ಮ ಪ್ರಯತ್ನವೂ ಕೆಲಸ ಮಾಡದಿರುವ ಘಟನೆಗಳು ನಡೆಯುತ್ತವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.