ADVERTISEMENT

ಒಗ್ಗಟ್ಟಿನಿಂದ ಇರೋಣ: ಜನರಿಗೆ ಕರೆ ನೀಡಿದ ಬಾಂಗ್ಲಾದೇಶದ ಭಾವಿ ಪ್ರಧಾನಿ ತಾರಿಕ್

ಪಿಟಿಐ
Published 14 ಫೆಬ್ರುವರಿ 2026, 13:22 IST
Last Updated 14 ಫೆಬ್ರುವರಿ 2026, 13:22 IST
ತಾರಿಕ್ ರೆಹಮಾನ್
ತಾರಿಕ್ ರೆಹಮಾನ್   

ಢಾಕಾ: ಬಾಂಗ್ಲಾದೇಶದ ಮುಂದಿನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಬಿಎನ್‌ಪಿ ಪಕ್ಷದ ಮುಖ್ಯಸ್ಥ ತಾರಿಕ್‌ ರೆಹಮಾನ್‌ ಅವರು ಒಗ್ಗಟ್ಟಿನಿಂದ ಇರುವಂತೆ ದೇಶದ ಜನರಿಗೆ ಕರೆ ನೀಡಿದ್ದಾರೆ.

ಚುನಾವಣೆಯ ಫಲಿತಾಂಶದ ಬಳಿಕ ದೇಶವನ್ನುದ್ದೇಶಿಸಿ ಮಾಡಿದ ಮೊದಲ ಭಾಷಣದಲ್ಲಿ ಅವರು, ತಮ್ಮ ಪಕ್ಷದ ಅಭೂತಪೂರ್ವ ಗೆಲುವನ್ನು ಪ್ರಜಾಪ್ರಭುತ್ವದ ಉಳಿವಿಗಾಗಿ ತ್ಯಾಗ ಮಾಡಿದವರಿಗೆ ಅರ್ಪಿಸಿದ್ದಾರೆ.

ಗುರುವಾರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಮೂರನೇ ಎರಡು ಬಹುಮತ ಪಡೆದುಕೊಂಡಿದೆ. ಚುನಾವಣೆ ನಡೆದ 299 ಕ್ಷೇತ್ರಗಳಲ್ಲಿ 212 ಸ್ಥಾನಗಳನ್ನು ಬಿಎನ್‌ಪಿ ತನ್ನದಾಗಿಸಿಕೊಂಡಿದೆ. ಪ್ರಮುಖ ಪ್ರತಿಸ್ಪರ್ಧಿ ಜಮಾತ್‌ ಎ ಇಸ್ಲಾಮಿ ನೇತೃತ್ವದ ಮೈತ್ರಿಕೂಟ 77 ಸ್ಥಾನಗಳನ್ನು ಜಯಿಸಿದೆ.

ADVERTISEMENT

‘ನಾವು ತುಳಿಯುವ ಹಾದಿ ಮತ್ತು ಅಭಿಪ್ರಾಯಗಳು ಭಿನ್ನವಾಗಿರಬಹುದು. ಆದರೆ ದೇಶದ ಹಿತಾಸಕ್ತಿಗಾಗಿ, ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ರಾಷ್ಟ್ರೀಯ ಏಕತೆಯು ಸಾಮೂಹಿಕ ಶಕ್ತಿಯಾದರೆ, ವಿಭಜನೆ ಎನ್ನುವುದು ದೌರ್ಬಲ್ಯವಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ’ ಎಂದು ಹೇಳಿದ್ದಾರೆ.

‘ಬಿಎನ್‌ಪಿಗೆ ದೊರೆತ ಯಶಸ್ಸು ಈ ದೇಶಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಸಂದ ಗೆಲುವು ಆಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಮರುಸ್ಥಾಪನೆಗೆ ಆಶಿಸಿದ ಮತ್ತು ಅದಕ್ಕಾಗಿ ತ್ಯಾಗ ಮಾಡಿದ ಜನರಿಗೆ ಗೆಲುವು ಅರ್ಪಿಸುತ್ತೇನೆ’ ಎಂದಿದ್ದಾರೆ.

ಸವಾಲು ಮುಂದಿದೆ:

‘ಹೊಸ ಸರ್ಕಾರದ ಮುಂದೆ ಸಾಕಷ್ಟು ಸವಾಲುಗಳಿವೆ. ಈ ಹಿಂದೆ ಇದ್ದ ಸರ್ವಾಧಿಕಾರಿ ಆಡಳಿತವು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಾಶಪಡಿಸಿದೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಪ್ರಯಾಣ ಆರಂಭಿಸಲಿದ್ದೇವೆ’ ಎಂದಿದ್ದಾರೆ.

ಸ್ವಾತಂತ್ರ್ಯವನ್ನು ಪ್ರೀತಿಸುವ ಮತ್ತು ಪ್ರಜಾಪ್ರಭುತ್ವದ ಪರವಾಗಿರುವ ಜನರು ಮತ್ತೊಮ್ಮೆ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಗೆ ಜಯ ತಂದುಕೊಟ್ಟಿದ್ದಾರೆ
ತಾರಿಕ್‌ ರೆಹಮಾನ್ ಬಿಎನ್‌ಪಿ ಮುಖ್ಯಸ್ಥ
ಜನಾದೇಶ ಒಪ್ಪಿಕೊಂಡ ಜಮಾತ್‌ ಎ ಇಸ್ಲಾಮಿ
ಬಾಂಗ್ಲಾದೇಶದ ಅತಿದೊಡ್ಡ ಇಸ್ಲಾಮಿಸ್ಟ್ ಪಕ್ಷ ಜಮಾತ್‌ ಎ ಇಸ್ಲಾಮಿಯು ಜನಾದೇಶವನ್ನು ಒಪ್ಪಿಕೊಳ್ಳುವುದಾಗಿ ಶನಿವಾರ ಹೇಳಿದೆ. ‘ಮತದಾನ ಪ್ರಕ್ರಿಯೆಯಲ್ಲಿ ಲೋಪಗಳು ನಡೆದಿವೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು’ ಎಂದು ಪಕ್ಷವು ಶುಕ್ರವಾರ ಹೇಳಿತ್ತು. ಆದರೆ ಪಕ್ಷದ ಮುಖ್ಯಸ್ಥ ಶಫೀಕ್‌ ಉರ್‌ ರೆಹಮಾನ್‌ ಅವರು ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿರುವುದಾಗಿ ಶನಿವಾರ ತಿಳಿಸಿದ್ದಾರೆ. ‘ನಾವು ಒಟ್ಟಾರೆ ಫಲಿತಾಂಶವನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ಕಾನೂನನ್ನು ಗೌರವಿಸುತ್ತೇವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.