
ತಾರಿಕ್ ರೆಹಮಾನ್
ಢಾಕಾ: ಮಹತ್ವದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸಿರುವ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ತಾರಿಕ್ ರೆಹಮಾನ್ ಅವರು ನೂತನ ಪ್ರಧಾನಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಧಾನಿಯ ಪ್ರಮಾಣವಚನ ಸ್ವೀಕಾರ ಸಮಾರಂಭವು ಈ ಬಾರಿ ದೀರ್ಘಕಾಲದ ಸಂಪ್ರದಾಯವನ್ನು ಮುರಿಯಲಿದೆ. ಅಧ್ಯಕ್ಷರ ಭವನ ಬಂಗಾಬಾನ್ ಬದಲಿಗೆ ಸಂಸತ್ ಭವನದ ದಕ್ಷಿಣ ಪ್ಲಾಜಾದಲ್ಲಿ ನಡೆಯಲಿದೆ.
ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಮಂಗಳವಾರ ಸಂಜೆ ನೂತನ ಸಚಿವ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಬಿಎಸ್‌ಎಸ್ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.
ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ಮಂಗಳವಾರ ಸಂಜೆ 4 ಗಂಟೆಗೆ ನಡೆಯಲಿದೆ. ಇದಕ್ಕೂ ಮುನ್ನ ಸಂಸದರು ಬೆಳಿಗ್ಗೆ 10 ಗಂಟೆಗೆ ಜಾತೀಯ ಸಂಸದ್ ಸಂಕೀರ್ಣದ ದಕ್ಷಿಣ ಪ್ಲಾಜಾದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಜಾತೀಯ ಸಂಸದ್ ಸಚಿವಾಲಯದ ಕಾರ್ಯದರ್ಶಿ ಕನಿಜ್ ಮೌಲಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಬಿಎನ್‌ಪಿ ಸಂಸದೀಯ ಪಕ್ಷದ ಸಭೆ ಬೆಳಿಗ್ಗೆ 11.30ಕ್ಕೆ ಸಂಸತ್ ಭವನದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ತಾರಿಕ್ ರೆಹಮಾನ್ ಅವರು ಪ್ರಧಾನಿಯಾಗಿ ಆಯ್ಕೆ ಆಗಲಿದ್ದಾರೆ ಎಂದು ಪಕ್ಷದ ಸ್ಥಾಯಿ ಸಮಿತಿ ಸದಸ್ಯ ಸಲಾಹುದ್ದೀನ್ ಅಹ್ಮದ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.