
ನವದೆಹಲಿ/ದುಬೈ: ದುಬೈ ಏರ್‌ಶೋ ವೇಳೆ ಭಾರತೀಯ ವಾಯುಪಡೆಯ ಲಘು ಯುದ್ಧ ವಿಮಾನ (ಎಲ್‌ಸಿಎ) ‘ತೇಜಸ್’ ಶುಕ್ರವಾರ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾರೆ.
ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅಭಿವೃದ್ಧಿಪಡಿಸಿರುವ, ಏಕ ಆಸನವುಳ್ಳ ಈ ಯುದ್ಧ ವಿಮಾನವು ಶುಕ್ರವಾರ ಮಧ್ಯಾಹ್ನ ಏರ್‌ಶೋನಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ, ನೋಡು ನೋಡುತ್ತಿದ್ದಂತೆ ಆಗಸದಿಂದ ಬೆಂಕಿಯುಂಡೆ ನೆಲಕ್ಕೆ ಅಪ್ಪಳಿಸಿ ಪತನಗೊಂಡಿತು. ಘಟನೆ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದ್ದರಿಂದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಯೇ ಎನ್ನುವ ಅನುಮಾನ ವ್ಯಕ್ತವಾಗಿತ್ತು. ದುರ್ಘಟನೆಯಲ್ಲಿ ಪೈಲಟ್ ಮೃತಪಟ್ಟಿರುವುದನ್ನು ವಾಯುಪಡೆ ಸಂಜೆಯ ವೇಳೆಗೆ ದೃಢಪಡಿಸಿದೆ.
‘ದುಬೈ ಏರ್‌ಶೋನ ವೈಮಾನಿಕ ಪ್ರದರ್ಶನದ ವೇಳೆ ತೇಜಸ್ ಪತನಗೊಂಡಿದೆ. ಮೃತಪಟ್ಟ ಪೈಲಟ್ ಕುಟುಂಬದ ಜತೆಗೆ ಐಎಎಫ್ ನಿಲ್ಲಲಿದೆ. ತಾಂತ್ರಿಕ ಲೋಪವೂ ಸೇರಿದಂತೆ ವಿಮಾನ ಪತನಕ್ಕೆ ನಿಖರ ಕಾರಣ ತಿಳಿಯಲು ತನಿಖೆ ನಡೆಯಲಿದೆ’ ಎಂದು ಐಎಎಫ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
‘ವಿಮಾನದ ಪತನಗೊಂಡ ಬೆನ್ನಲ್ಲೇ ಅಗ್ನಿಶಾಮಕ ಮತ್ತು ತುರ್ತು ಕಾರ್ಯಪಡೆ ತಂಡಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ಭಾಗಿಯಾದವು’ ಎಂದು ದುಬೈ ಮಾಧ್ಯಮ ಕಚೇರಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
2025ರ ದುಬೈ ಏರ್‌ಶೋಗೆ ನವೆಂಬರ್ 17ರಂದು ಚಾಲನೆ ಲಭಿಸಿತ್ತು. ಈ ಬಾರಿ 1,500ಕ್ಕೂ ಹೆಚ್ಚು ಪ್ರದರ್ಶನಕಾರರು, 150 ದೇಶಗಳಿಂದ ವೈಮಾನಿಕ ಕ್ಷೇತ್ರದ 1.48 ಲಕ್ಷ ವೃತ್ತಿಪರರು ಭಾಗವಹಿಸಿದ್ದರು. ‘ತೇಜಸ್’ ಯುದ್ಧವಿಮಾನದ ಜತೆಗೆ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್’ ತಂಡವೂ ಪ್ರದರ್ಶನದಲ್ಲಿ ಭಾಗವಹಿಸಿದೆ.
2ನೇ ದುರಂತ
ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗುತ್ತಿರುವುದು ಇದು ಎರಡನೆಯ ಬಾರಿ. 2024ರ ಮಾರ್ಚ್‌ನಲ್ಲಿ ಪೋಖ್ರಾನ್ ಮರುಭೂಮಿಯಲ್ಲಿ ಮಿಲಿಟರಿ ತರಬೇತಿ ಮುಗಿಸಿಕೊಂಡು ಮರಳುತ್ತಿದ್ದ ವೇಳೆ ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಜನವಸತಿ ಪ್ರದೇಶದಲ್ಲಿ ತೇಜಸ್ ಪತನಗೊಂಡಿತ್ತು. ವಿಮಾನದಿಂದ ಸುರಕ್ಷಿತವಾಗಿ ಜಿಗಿಯುವ ಮೂಲಕ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದರು. 2001ರಲ್ಲಿ ಭಾರತೀಯ ವಾಯುಪಡೆಗೆ ತೇಜಸ್ ಸೇರ್ಪಡೆಗೊಂಡ ನಂತರ ನಡೆದಿದ್ದ ಮೊದಲ ಅಪಘಾತ ಇದಾಗಿತ್ತು. ತೇಜಸ್ ಯುದ್ಧ ವಿಮಾನದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು 1984ರಲ್ಲಿ. ಆದರೆ ಇದು ಹಾರಾಟಕ್ಕೆ ಯೋಗ್ಯವಾಗಿದೆ ಎಂದು ಅಧಿಕೃತವಾಗಿ ಘೋಷಣೆಯಾಗಿದ್ದು 2011ರಲ್ಲಿ.
ಇಂತಹ ದುಃಖದ ಸಮಯದಲ್ಲಿ ಮೃತ ಪೈಲಟ್‌ನ ಕುಟುಂಬದ ಜತೆಗೆ ಭಾರತೀಯ ಸೇನಾಪಡೆಗಳು ದೃಢವಾಗಿ ನಿಲ್ಲಲಿವೆಜನರಲ್ ಅನಿಲ್ ಚೌಹಾಣ್ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.