ಕೆನಾನಸ್ಕಿಸ್ (ಕೆನಡಾ): ‘ಗಡಿಯಾಚೆಗಿನ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮ ಅಗತ್ಯ. ಇದಕ್ಕೆ ಜಿ–7 ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಪ್ರತಿಪಾದಿಸಿದರು.
ಜಿ–7 ರಾಷ್ಟ್ರಗಳ ಶೃಂಗಸಭೆಯಲ್ಲಿ ಮಾತನಾಡಿದ ಅವರು,‘ಭಯೋತ್ಪಾದನೆ ನಮ್ಮ ಮುಂದಿರುವ ದೊಡ್ಡ ಸವಾಲು. ಇದರ ಬಗ್ಗೆ ಕಣ್ಮುಚ್ಚಿ ಕೂರುವುದು ಮಾನವೀಯತೆಗೆ ಎಸಗುವ ದ್ರೋಹವಾಗುತ್ತದೆ’ ಎಂದು ಅವರು ಪಾಕಿಸ್ತಾನ ವಿರುದ್ಧ ವಾಗ್ದಾಳಿ ನಡೆಸಿದರು.
‘ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯು ಪ್ರತಿಯೊಬ್ಬ ಭಾರತೀಯನ ಆತ್ಮ, ಅಸ್ಮಿತೆ ಹಾಗೂ ಘನತೆ ಮೇಲೆ ನಡೆದ ದಾಳಿಯಾಗಿದೆ. ಜಾಗತಿಕ ಶಾಂತಿ, ಸಮೃದ್ಧಿಗಾಗಿ ನಮ್ಮ ಚಿಂತನೆ ಮತ್ತು ನೀತಿಗಳು ಸ್ಪಷ್ಟವಾಗಿರಬೇಕು. ಭಯೋತ್ಪಾದನೆಯನ್ನು ಬೆಂಬಲಿಸುವ ಯಾವುದೇ ರಾಷ್ಟ್ರವನ್ನು ತನ್ನ ಕೃತ್ಯಕ್ಕೆ ತಕ್ಕ ಬೆಲೆತರುವಂತೆ ಮಾಡಬೇಕು’ ಎಂದರು.
‘ನಮ್ಮ ನೆರೆರಾಷ್ಟ್ರವೇ ಭಯೋತ್ಪಾದನೆಯ ಉತ್ಪಾದನಾ ನೆಲೆಯಾಗಿದೆ’ ಎಂದ ಅವರು, ‘ಒಂದು ಕಡೆ ನಮ್ಮ ಆದ್ಯತೆ–ಹಿತಾಸಕ್ತಿಗೆ ಧಕ್ಕೆ ತಂದವರ ವಿರುದ್ಧ ನಾವು ನಿರ್ಬಂಧಗಳನ್ನು ಹೇರುತ್ತಿದ್ದರೆ, ಮತ್ತೊಂದೆಡೆ ಭಯೋತ್ಪಾದನೆಗೆ ಬಹಿರಂಗವಾಗಿಯೇ ಉತ್ತೇಜನ ನೀಡುತ್ತಿರುವ ರಾಷ್ಟ್ರಕ್ಕೆ ಸನ್ಮಾನಗಳು ಸಲ್ಲುತ್ತಿವೆ ಎಂದು ದೂರಿದ್ದಾರೆ. ಭಯೋತ್ಪಾದನೆ ವಿರುದ್ಧದ ನೀತಿಯಲ್ಲಿ ದ್ವಂದ್ವ ಇರಕೂಡದು’ ಎಂದೂ ಹೇಳಿದ್ದಾರೆ.
‘ವಾಟರ್‌ಮಾರ್ಕ್ ಕಡ್ಡಾಯವಾಗಲಿ’: ಇದೇ ವೇಳೆ ಇಂಧನ ಭದ್ರತೆ, ಎಐ ತಂತ್ರಜ್ಞಾನದ ಕುರಿತು ಮಾತನಾಡಿದ ಪ್ರಧಾನಿ, ಯಾವುದೇ ದೇಶವು ತನ್ನ ವೈಯಕ್ತಿಕ ಹಿತಾಸಕ್ತಿಗೆ ಈ ತಂತ್ರಜ್ಞಾನವನ್ನು ಅಸ್ತ್ರದಂತೆ ಬಳಸಕೂಡದು ಎಂದಿದ್ದಾರೆ.
ಡೀಪ್‌ಫೇಕ್ ಎನ್ನುವುದು ಅತಿದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇವುಗಳಿಗೆಲ್ಲಾ ಕಡಿವಾಣ ಹಾಕಲು ಎಐ ಕಂಟೆಂಟ್‌ಗಳಿಗೆ ವಾಟರ್ ಮಾರ್ಕ್ ಅಥವಾ ನಿರ್ದಿಷ್ಟ ವಿವರಣೆ ಹೊಂದಿರುವುದನ್ನು ಕಡ್ಡಾಯ ಮಾಡಬೇಕು ಎಂದಿದ್ದಾರೆ.
ಇಂದು ನಾವು ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಇತಿಹಾಸ ನಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲನರೇಂದ್ರ ಮೋದಿ ಪ್ರಧಾನಿ
ಜಿ7 ನಾಯಕರ ಎದುರು ಮೋದಿ ಪ್ರಶ್ನೆ: ಭಯೋತ್ಪಾದನೆಯನ್ನು ಉತ್ತೇಜಿಸುವವರನ್ನೂ ಭಯೋತ್ಪಾದನೆಯಿಂದ ತೊಂದರೆಗೀಡಾದವರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವೇ? ಎಂದು ಜಿ–7 ನಾಯಕರನ್ನು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ. ಅಲ್ಲದೇ ‘ನಮಗೆ ಭಯೋತ್ಪಾದನೆಯ ನಿಜವಾದ ಅರ್ಥ ಗೊತ್ತಿದೆಯಾ? ಅಥವಾ ಭಯೋತ್ಪಾದನೆ ನಮ್ಮ ಮನೆಯ ಬಾಗಿಲುಗಳನ್ನು ತಟ್ಟಿದ ಬಳಿಕ ಅದನ್ನು ಅರ್ಥೈಸಿಕೊಳ್ಳುತ್ತೇವಾ?’ ಎಂದೂ ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.