ADVERTISEMENT

ಟೆಕ್ಸಾಸ್‌: ಗರ್ಭಪಾತದ ನಿಷೇಧ ಆದೇಶಕ್ಕೆ ತಡೆ, ಬೈಡನ್ ಸರ್ಕಾರಕ್ಕೆ ಹಿನ್ನಡೆ

ಪಿಟಿಐ
Published 9 ಅಕ್ಟೋಬರ್ 2021, 3:43 IST
Last Updated 9 ಅಕ್ಟೋಬರ್ 2021, 3:43 IST
   

ವಾಷಿಂಗ್ಟನ್: ಟೆಕ್ಸಾಸ್‌ನ ಗರ್ಭಪಾತದ ಮೇಲಿನ ಸಂಪೂರ್ಣ ನಿಷೇಧವನ್ನು ಅಮೆರಿಕದ ಮೇಲ್ಮನವಿಗೆ ಸಂಬಂಧಿಸಿದ ಉನ್ನತ ನ್ಯಾಯಾಲಯವು ತಾತ್ಕಾಲಿಕವಾಗಿ ಮರು ಸ್ಥಾಪಿಸಿದ್ದು, ಇದು ಗರ್ಭಪಾತ ಹಕ್ಕುಗಳ ವಕೀಲರು ಮತ್ತು ಬೈಡನ್ ಆಡಳಿತಕ್ಕೆ ಹಿನ್ನಡೆಯಾದಂತಾಗಿದೆ.

ಗರ್ಭಪಾತದ ಮೇಲಿನ ನಿಷೇಧವನ್ನು ತೆಗೆದು ಹಾಕುವ ಅಕ್ಟೋಬರ್ 6ರ ಕೆಳ ನ್ಯಾಯಾಲಯದ ಆದೇಶಕ್ಕೆ ಆಡಳಿತಾತ್ಮಕ ತಡೆ ನೀಡುತ್ತಿರುವುದಾಗಿ ಉನ್ನತ ನ್ಯಾಯಾಲಯ ಹೇಳಿದೆ.

ಆಡಳಿತಾತ್ಮಕ ತಡೆಯಾಜ್ಞೆಯ ಉದ್ದೇಶವೇನೆಂದರೆ, ಗರ್ಭಪಾತ ಹಕ್ಕುಗಳಿಗೆ ಸಂಬಂಧಿಸಿದಂತೆ ಶಾಶ್ವತ ಆದೇಶ ಜಾರಿಗೆ ನ್ಯಾಯಾಲಯಕ್ಕೆ ಹೆಚ್ಚು ಸಮಯ ನೀಡುವುದಾಗಿದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.

ADVERTISEMENT

ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದ ಟೆಕ್ಸಾಸ್ ಗರ್ಭಪಾತ ಕಾನೂನು, ಗರ್ಭಧಾರಣೆಯ ಆರು ವಾರಗಳ ನಂತರ ಗರ್ಭಪಾತವನ್ನು ನಿಷೇಧಿಸುತ್ತದೆ.

ಅತ್ಯಾಚಾರ ಅಥವಾ ಸಂಭೋಗದಿಂದ ಉಂಟಾಗುವ ಗರ್ಭಧಾರಣೆಗೆ ಕಾನೂನು ಯಾವುದೇ ವಿನಾಯಿತಿ ನೀಡುವುದಿಲ್ಲ. ಭ್ರೂಣದ ಹೃದಯ ಚಟುವಟಿಕೆಯನ್ನು ಪತ್ತೆಹಚ್ಚಿದ ನಂತರ ಗರ್ಭಪಾತಕ್ಕೆ ಸಹಾಯ ಮಾಡಿದ ಯಾರನ್ನಾದರೂ ಗುರುತಿಸಿ ಮೊಕದ್ದಮೆ ಹೂಡಿದರೆ ಅವರಿಗೆ ಕನಿಷ್ಠ 10,000 ಡಾಲರ್ ಬಹುಮಾನ ನೀಡುವ ಮೂಲಕ ಯಶಸ್ವಿಯಾಗಿ ನಿಷೇಧ ಜಾರಿಗೊಳಿಸಲು ಈ ಕಾನೂನು ಅವಕಾಶ ನೀಡುತ್ತದೆ. ಆದರೆ, ಕಾನೂನಿನ ಈ ನಿಬಂಧನೆಯು ಜನರು ಗರ್ಭಪಾತದ ವಿರೋಧಿ ಬೇಟೆಗಾರರಾಗಿ ವರ್ತಿಸಲು ಅನುವು ಮಾಡಿಕೊಡುತ್ತದೆ ಎಂದು ಟೀಕೆ ಕೇಳಿಬಂದಿತ್ತು.

ಅಮೆರಿಕದ ಆಸ್ಟಿನ್‌ನ ಜಿಲ್ಲಾ ನ್ಯಾಯಾಧೀಶ ರಾಬರ್ಟ್ ಪಿಟ್ಮನ್ ಬುಧವಾರ ಗರ್ಭಪಾತ ನಿಷೇಧ ಕಾನೂನಿಗೆ ತಾತ್ಕಾಲಿಕ ತಡೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.