ADVERTISEMENT

ಪಾಕಿಸ್ತಾನವು ಭಯೋತ್ಪಾದಕತೆ ಬೆಂಬಲಿಸುವ, ಸಂತ್ರಸ್ತರಂತೆ ನಟಿಸುವ ದೇಶ: ಭಾರತ

ಪಿಟಿಐ
Published 7 ಅಕ್ಟೋಬರ್ 2021, 5:59 IST
Last Updated 7 ಅಕ್ಟೋಬರ್ 2021, 5:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಿಶ್ವಸಂಸ್ಥೆ: ‘ಪಾಕಿಸ್ತಾನವು ಭಯೋತ್ಪಾದಕತೆಯನ್ನು ಬೆಂಬಲಿಸುವ ಹಾಗೂ ಭಯೋತ್ಪಾದನೆಯಿಂದ ಸಂತ್ರಸ್ತರಾಗಿರುವಂತೆ ನಟಿಸುವ ಬಹುದೊಡ್ಡ ರಾಷ್ಟ್ರವಾಗಿದೆ’ ಎಂದು ವಿಶ್ವಸಂಸ್ಥೆಯ ಭಾರತದ ಕಾಯಂ ಮಿಷನ್‌ನ ಸಲಹೆಗಾರ ಡಾ. ಕಾಜಲ್ ಭಟ್‌ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರದ ವಿಷಯ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ ಕಟುವಾಗಿ ಪ್ರತಿಕ್ರಿಯಿಸಿರುವ ಭಟ್, ‘ತನ್ನ ದೇಶದಲ್ಲಿರುವ ಹಿಂದು, ಕ್ರಿಶ್ಚಿಯನ್, ಸಿಖ್‌ ಮತ್ತು ಬೌದ್ಧರು ಸೇರಿದಂತೆ ಅಲ್ಪಸಂಖ್ಯಾತರ ಒಕ್ಕಲೆಬ್ಬಿಸುವುದನ್ನು ಪಾಕಿಸ್ತಾನ ಮೊದಲು ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ವಿಶ್ವಸಂಸ್ಥೆಯ 'ಅಂತರಾಷ್ಟ್ರೀಯ ಭಯೋತ್ಪಾದನೆ ನಿವಾರಣೆಗೆ ಕ್ರಮಗಳು' ಕುರಿತು ನಡೆದ 6ನೇ ಕಾನೂನು ಸಮಿತಿಯ ಸಭೆಯಲ್ಲಿ ಮಾತನಾಡಿದ ಭಟ್‌,‘ಎಲ್ಲ ಹಂತಗಳಲ್ಲೂ, ವಿಭಾಗಗಳಲ್ಲೂ ಭಯೋತ್ಪಾದನೆಯ ವಿರುದ್ಧದ ಹೋರಾಟ ನಿರಂತರವಾಗಿ ನಡೆಯಬೇಕು‘ ಎಂದು ಪ್ರತಿಪಾದಿಸಿದರು. ಹಾಗೆಯೇ ‘ಈ ಹೋರಾಟಕ್ಕೆ ಸಂಬಂಧಿಸಿದಂತೆ ಎಲ್ಲಾ ಸದಸ್ಯ ರಾಷ್ಟ್ರಗಳು ಅಂತರರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಸಮಾವೇಶಗಳಲ್ಲಿ, ಭಯೋತ್ಪಾದನೆ ನಿಗ್ರಹ ಕುರಿತು ತಮ್ಮಲ್ಲಿರುವ ವಿಚಾರಗಳನ್ನು ಪ್ರಸ್ತುತಪಡಿಸಬೇಕು‘ ಎಂದು ಹೇಳಿದರು.

ADVERTISEMENT

‘ಪಾಕಿಸ್ತಾನವು ಕಾಶ್ಮೀರದ ಕುರಿತು ಮತ್ತೆ ಸುಳ್ಳುಗಳನ್ನು‌ ಹರಿಯ ಬಿಡಲು ಈ ವೇದಿಕೆಯನ್ನು ದುರುಪಯೋಗ ಮಾಡಿಸಿಕೊಳ್ಳುತ್ತಿರುವುದಕ್ಕೆ ನನಗೆ ಬೇಸರವಾಗಿದೆ‘ ಎಂದು ಭಟ್ ಅವರು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.