ಕ್ಯಾಲಿಫೋರ್ನಿಯಾದ ಪ್ಯಾಸಡೀನಾದ ನಗರದ ಹತ್ತಿರ ಆಲ್ಟಡೀನಾ ಪ್ರದೇಶದಲ್ಲಿ ಎದ್ದಿರುವ ಕಾಳ್ಗಿಚ್ಚು
ನ್ಯೂಯಾರ್ಕ್: ಲಾಸ್ ಏಂಜಲೀಸ್ ನಗರದಲ್ಲಿನ ಪೆಸಿಫಿಕ್ ಪ್ಯಾಲಿಸೈಡ್ಸ್ ಹಾಗೂ ಪ್ಯಾಸಡೀನಾದ ಈಟನ್ ಕೆಯಾನ್ ಪ್ರದೇಶವು ಮಂಗಳವಾರ ರಾತ್ರಿಯಿಂದ ಹೊತ್ತಿ ಉರಿಯುತ್ತಿದೆ. ಬುಧವಾರ ಬೆಳಿಗ್ಗೆಯಿಂದ ಸೈಲ್ಮಾರ್ ಪ್ರದೇಶವು ಬೆಂಕಿಯಿಂದ ಆವರಿಸಿದೆ. ಲಾಸ್ ಏಂಜಲೀಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ‘ಸಂತಾ ಆನಾ’ ಎಂಬ ಸುಂಟರ ಗಾಳಿಯು ಎಬ್ಬಿಸಿದ ಕಾಳ್ಗಿಚ್ಚಿನಿಂದಾಗಿ ದೊಡ್ಡ ಪ್ರಮಾಣದ ಹಾನಿ ಉಂಟಾಗಿದೆ. ಒಣಗಾಳಿಯಿಂದ ಎದ್ದ ಈ ಬೆಂಕಿಯನ್ನು ನಂದಿಸಲು ಮಾಡುತ್ತಿರುವ ಯತ್ನಗಳು ಫಲ ಕೊಡುತ್ತಿಲ್ಲ.
ಕಾರ್ಯಾಚರಣೆ ವೇಳೆ ಅಗ್ನಿಶಾಮಕ ದಳದ ಮಹಿಳಾ ಸಿಬ್ಬಂದಿಯೊಬ್ಬರ ತಲೆಗೆ ಗಾಯವಾಗಿದೆ. ಎಲ್ಲೆಲ್ಲೂ ಭಯಭೀತ ಮುಖಗಳು, ಜನರ ಕೀರಾಟವೇ ಪ್ರತಿಧ್ವನಿಸುತ್ತಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಾವಿರಾರು ಜನರು ಮನೆ ಬಿಟ್ಟು ಓಡುತ್ತಿದ್ದಾರೆ. ಕಾರು ಏರಿ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿದ್ದಾರೆ. ಇದರಿಂದ ಪೆಸಿಫಿಕ್ ಪ್ಯಾಲಿಸೈಡ್ಸ್ ಪ್ರದೇಶದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ದುರಂತದ ವಿಡಿಯೊಗಳು, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಡೀ ಲಾಸ್ ಏಂಜಲೀಸ್ ನಗರದ ಸುತ್ತ ದಟ್ಟ ಹೊಗೆ ಎದ್ದಿದೆ. ಹಲವು ಜನರ ಮುಖದ ಮೇಲೆ, ಕೈ ಕಾಲುಗಳ ಮೇಲೆ ಸುಟ್ಟ ಗಾಯಗಳಾಗಿವೆ. ಆದರೆ, ಇದುವರೆಗೂ ಸಾವು–ನೋವು, ಹಾನಿಯ ಕುರಿತು ನಿಖರ ಮಾಹಿತಿ ಹೊರಬಂದಿಲ್ಲ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮಂಗಳವಾರ ಲಾಸ್ ಏಂಜಲೀಸ್‌ನಲ್ಲಿಯೇ ಇದ್ದರು. ಅವರು ಕ್ಯಾಲಿಫೋರ್ನಿಯಾದ ರಿವರ್‌ಸೈಡ್ ಪ್ರದೇಶಕ್ಕೆ ಪ್ರವಾಸ ತೆರಳಬೇಕಿತ್ತು. ಆದರೆ, ಕಾಳ್ಗಿಚ್ಚಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ತಮ್ಮ ಪ್ರವಾಸವನ್ನು ರದ್ದು ಮಾಡಿ ಲಾಸ್ ಏಂಜಲೀಸ್‌ನಲ್ಲಿಯೇ ಉಳಿದರು. ಅವರು ಉಳಿದುಕೊಂಡ ಹೋಟೆಲ್ ಮೇಲೆಯೂ ದಟ್ಟ ಹೊಗೆ ಆವರಿಸಿತ್ತು.
ಪ್ರತಿ ವರ್ಷದ ಚಳಿಗಾಲದಲ್ಲಿ ಕ್ಯಾಲಿಫೋರ್ನಿಯಾದ ದಕ್ಷಿಣ ಒಳಭಾಗದಲ್ಲಿ ‘ಸಂತಾ ಆನಾ’ ಎಂಬ ಮಾರುತವೊಂದು ಏಳುತ್ತದೆ. ಈ ವೇಳೆ ಗಾಳಿಯಲ್ಲಿ ತೇವಾಂಶ ಇರಲಿದೆ. ಆದರೆ, ಈ ಮಾರುತವು ಕ್ಯಾಲಿಫೋರ್ನಿಯಾದ ಕರವಾಳಿ ಭಾಗಕ್ಕೆ ತಲುಪುತ್ತಿದ್ದಂತೆಯೇ ಸುಂಟರ ಗಾಳಿಯಾಗಿ ಪರಿವರ್ತನೆಗೊಳ್ಳುತ್ತದೆ. ಗಾಳಿಯಲ್ಲಿ ತೇವಾಂಶವೇ ಇರುವುದಿಲ್ಲ. ಒಂದು ಸಣ್ಣ ಕಿಡಿಯನ್ನು ಕಾಳ್ಗಿಚ್ಚು ಆಗಿಸಬಲ್ಲ ಶಕ್ತಿ ಈ ಗಾಳಿಗಿರುತ್ತದೆ. ಈ ಹಿಂದೆಯೂ ಈ ಸುಂಟರ ಗಾಳಿಯ ಕಾರಣಕ್ಕೆ ಹಲವು ಜೀವಗಳು, ಆಸ್ತಿಗಳು ಹಾನಿಗೊಳಗಾಗಿವೆ. ಇದಕ್ಕಾಗಿಯೇ ಇದನ್ನು ರಕ್ಕಸ ಮಾರುತ ಎಂದೂ ಕರೆಯಲಾಗುತ್ತದೆ
ಆಧಾರ: ಎಪಿ, ರಾಯಿಟರ್ಸ್, ‘ದಿ ಗಾರ್ಡಿಯನ್’ ಪತ್ರಿಕೆ, ಲಾಸ್ ಏಂಜಲೀಸ್ ಅಗ್ನಿ ಶಾಮಕ ಇಲಾಖೆ ವೆಬ್‌ಸೈಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.