ADVERTISEMENT

ಕೋವಿಡ್‌ ನಡುವೆ ಹಕ್ಕಿ ಜ್ವರ: ಡೆನ್‌ಮಾರ್ಕ್‌ನಲ್ಲಿ ಕೋಳಿಗಳ ಮಾರಣಹೋಮ

ಏಜೆನ್ಸೀಸ್
Published 17 ನವೆಂಬರ್ 2020, 3:11 IST
Last Updated 17 ನವೆಂಬರ್ 2020, 3:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಪನ್‌ಹೆಗನ್‌(ಡೆನ್‌ಮಾರ್ಕ್‌): ಕೋವಿಡ್‌ ಸಾಂಕ್ರಾಮಿಕ ರೋಗದ ನಡುವೆಯೇ ಡೆನ್‌ಮಾರ್ಕ್‌ನಲ್ಲಿ ಹಕ್ಕಿ ಜ್ವರವೂ ಕಾಣಿಸಿಕೊಂಡಿದ್ದು, ಕೋಳಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಗಿದೆ.

'ಹಕ್ಕಿ ಜ್ವರದ ಹರಡುವಿಕೆಯನ್ನು ತಡೆಯುವ ಸಲುವಾಗಿ ಮಧ್ಯ ಜುಟ್‌ಲ್ಯಾಂಡ್‌ನ ಸುಮಾರು 25 ಸಾವಿರ ಕೋಳಿಗಳನ್ನು ಕೊಲ್ಲುವಂತೆ ಆದೇಶ ಮಾಡಲಾಯಿತು,'ಎಂದು ದೇಶದ ಪಶುವೈದ್ಯಕೀಯ ಮತ್ತು ಆಹಾರ ಇಲಾಖೆ ತಿಳಿಸಿದೆ.

'ರಾಂಡರ್ಸ್ ಬಳಿಯ ಟ್ರಸ್ಟ್ರಪ್‌ನಲ್ಲಿರುವ ಕೋಳಿ ಹಿಂಡಿನಲ್ಲಿ ಸಾಂಕ್ರಾಮಿಕ ಹಕ್ಕಿ ಜ್ವರ (H5N8) ಇರುವುದು 'ಸ್ಟೇಟನ್ಸ್ ಸೀರಮ್ ಇನ್‌ಸ್ಟಿಟ್ಯೂಟ್‌'ನ ಅಧ್ಯಯನದಲ್ಲಿ ಪತ್ತೆಯಾಗಿದೆ. ಹಕ್ಕಿ ಜ್ವರ ಕಾಯಿಲೆಯು ಕೋಳಿಗಳಲ್ಲಿ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ' ಎಂದು ಇಲಾಖೆ ತಿಳಿಸಿದೆ.

ADVERTISEMENT

'ಸೋಂಕಿತ ಕೋಳಿಗಳನ್ನು ಕೊಲ್ಲಲಾಗಿದೆ. ಸೋಂಕುಪತ್ತೆಯಾಗಿರುವ ಸ್ಥಳದಲ್ಲಿ ಎರಡು ನಿರ್ಬಂಧಿತ ಪ್ರದೇಶಗಳನ್ನು ರಚಿಸಲಾಗಿದೆ. ಇಲ್ಲಿ ಪಕ್ಷಿಗಳು, ಕೋಳಿಗಳು ಮತ್ತು ಅದರ ಉತ್ಪನ್ನಗಳ ಮೇಲ್ವಿಚಾರಣೆ ನಡೆಯಲಿದೆ,'ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ, ಡೆನ್‌ಮಾರ್ಕ್‌ನ ಜುಟ್‌ಲ್ಯಾಂಡ್‌ ಪ್ರದೇಶದ ಕಾಡು ಪಕ್ಷಿಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಸದ್ಯ ಅದು ಸಾಂಕ್ರಾಮಿಕಗೊಳ್ಳುತ್ತಿದೆ. ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಯುರೋಪಿನ ವಿವಿಧ ಭಾಗಗಳಲ್ಲಿಯೂ ಅದು ಹರಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.