ADVERTISEMENT

ಶ್ರೀಲಂಕಾ: ಅಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ, ಕಣದಲ್ಲಿ ಮೂವರು ಸಂಸದರು

ಪಿಟಿಐ
Published 19 ಜುಲೈ 2022, 11:14 IST
Last Updated 19 ಜುಲೈ 2022, 11:14 IST
ಶ್ರೀಲಂಕಾ ರಾಷ್ಟ್ರಧ್ವಜ
ಶ್ರೀಲಂಕಾ ರಾಷ್ಟ್ರಧ್ವಜ   

ಕೊಲಂಬೊ: ಶ್ರೀಲಂಕಾದ ನೂತನ ಅಧ್ಯಕ್ಷರ ಆಯ್ಕೆಗೆ ಬುಧವಾರ ಚುನಾವಣೆ ನಡೆಯಲಿದ್ದು, ಹಂಗಾಮಿ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಸೇರಿದಂತೆ ಮೂವರ ಹೆಸರನ್ನು ಸಂಸದರು ಮಂಗಳವಾರ ಸೂಚಿಸಿದರು.

ಆಡಳಿತ ಪಕ್ಷ ಶ್ರೀಲಂಕಾ ಪೊಡುಜನ ಪೆರಮುನದ (ಎಸ್ಎಲ್‌ಪಿಪಿ) ಭಿನ್ನ ಗುಂಪಿನ ನಾಯಕ 63 ವರ್ಷದ ಡುಲ್ಲಾಸ್‌ ಅಲಹಪ್ಪೆರುಮ, ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ 53 ವರ್ಷದ ಅರುಣಾ ಕುಮಾರ ಡಿಸ್ಸಾನಾಯಕೆ ಕಣದಲ್ಲಿರುವ ಇತರರು.

ಕಡೆಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದ ವಿರೋಧಪಕ್ಷ ಸಮಗಿ ಜನ ಬಲವೇಗಯದ (ಎಸ್‌ಜೆಪಿ) ನಾಯಕ ಸಜಿತ್ ಪ್ರೇಮದಾಸ ಅವರೂ ಅಲಹಪ್ಪೆರುಮ ಅವರಿಗೆ ಬೆಂಬಲ ಘೋಷಿಸಿದರು.ಸಂಸತ್ತಿನ ಸದಸ್ಯ ಬಲ 225 ಆಗಿದ್ದು, ಹೊಸ ಅಧ್ಯಕ್ಷರ ಆಯ್ಕೆಗೆ ಮತದಾನ ಮಾಡುವರು. ನೂತನ ಅಧ್ಯಕ್ಷರ ಅಧಿಕಾರವಧಿ ನವೆಂಬರ್ 2024ರವರೆಗೂ ಇರಲಿದೆ.

ADVERTISEMENT

‘ತಮ್ಮ ಮತ್ತು ಇತರೆ ವಿರೋಧಪಕ್ಷಗಳು ಒಗ್ಗೂಡಿ ಡುಲ್ಲಾಸ್‌ ಅವರ ಗೆಲುವಿಗೆ ಶ್ರಮಿಸಲಿವೆ. ದೇಶದ ಭವಿಷ್ಯ ಮತ್ತು ನಾನು ಪ್ರೀತಿಸುವ ಪ್ರಜೆಗಳ ಏಳಿಗೆ ದೃಷ್ಟಿಯಿಂದ ತಾವು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ’ ಎಂದು ಪ್ರೇಮದಾಸ ಅವರು ಟ್ವೀಟ್ ಮಾಡಿದ್ದಾರೆ.

ಆರ್ಥಿಕ ವ್ಯವಸ್ಥೆಯು ಕುಸಿದ ಹಿಂದೆಯೇ ದೇಶದಾದ್ಯಂತ ಕಂಡುಬಂದ ಜನಾಕ್ರೋಶಕ್ಕೆ ಮಣಿದು ಅಧ್ಯಕ್ಷ ಸ್ಥಾನಕ್ಕೆ ಗೋಟಬಯ ರಾಜಪಕ್ಸ ರಾಜೀನಾಮೆ ನೀಡಿದ್ದರು. ತೆರವಾದ ಸ್ಥಾನಕ್ಕೆ ಈಗ ಚುನಾವಣೆ ನಡೆಯುತ್ತಿದೆ.

ಸಂಸತ್ತಿನ ಸ್ಪೀಕರ್ ಕೂಡಾ ಹಕ್ಕು ಚಲಾಯಿಸುವುದು ಬುಧವಾರದ ಚುನಾವಣೆಯ ವಿಶೇಷವಾಗಿದೆ. 1978ರ ನಂತರ ಇದೇ ಮೊದಲ ಬಾರಿಗೆ ಸಂಸದರು ಅಧ್ಯಕ್ಷರನ್ನು ಚುನಾಯಿಸಲಿದ್ದಾರೆ. ಈ ಹಿಂದೆ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಹತ್ಯೆಯಾದಾಗ, ಉಳಿದ ಅವಧಿಗೆ ಡಿ.ಬಿ.ವಿಜೇತುಂಗಾ ಅವರ ಆಯ್ಕೆಯನ್ನು ಸಂಸತ್ತು ಅನುಮೋದಿಸಿತ್ತು.

ಹಲ್ಲೆ: ಭಾರತೀಯ ಅಧಿಕಾರಿಗೆ ಗಾಯ
ಕೊಲಂಬೊ (ಪಿಟಿಐ):
ಆಡಳಿತ ವ್ಯವಸ್ಥೆ ವಿರುದ್ಧ ಶ್ರೀಲಂಕಾದಲ್ಲಿ ಜನಾಕ್ರೋಶ ಮುಂದುವರಿದಿದೆ. ಅಪ್ರಚೋದಿತ ಗುಂಪು ಹಲ್ಲೆಯಿಂದ ಮಂಗಳವಾರ ಭಾರತ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ಗಾಯಗೊಂಡರು.

ಈ ಸಂಬಂಧ ಟ್ವೀಟ್‌ ಮಾಡಿರುವ ರಾಯಭಾರ ಕಚೇರಿಯು, ‘ಶ್ರೀಲಂಕಾದಲ್ಲಿರುವ ಭಾರತೀಯ ಪ್ರಜೆಗಳಿಗೆ ದೇಶದ ಸದ್ಯದ ಸ್ಥಿತಿಯ ಅರಿವಿದೆ. ಅದರ ಅನುಸಾರ ತಮ್ಮ ಪ್ರಯಾಣ ನಿಗದಿಪಡಿಸಿಕೊಳ್ಳಬೇಕು. ನೆರವು ಅಗತ್ಯವಿದ್ದರೆ ಕಚೇರಿ ಸಂಪರ್ಕಿಸಿ’ ಎಂದು ತಿಳಿಸಿದೆ.

ಭಾರತೀಯ ಅಧಿಕಾರಿ ಗಾಯಗೊಂಡಿರುವ ಸಂಗತಿಯನ್ನು ಶ್ರೀಲಂಕಾದ ಆಡಳಿತದ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.