ADVERTISEMENT

ಚೀನಾದಲ್ಲಿ ಕೋವಿಡ್‌–19 ಮರುಕಳಿಸುವ ಸಾಧ್ಯತೆ!: ಆರೋಗ್ಯಾಧಿಕಾರಿಗಳ ಎಚ್ಚರಿಕೆ

ಪಿಟಿಐ
Published 4 ಮೇ 2020, 19:30 IST
Last Updated 4 ಮೇ 2020, 19:30 IST
   

ಬೀಜಿಂಗ್: ಚೀನಾದಲ್ಲಿ ಕೋವಿಡ್‌–19 ಮರುಕಳಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಉನ್ನತ ಆರೋಗ್ಯಾಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.

‘ಕಳೆದ 14 ದಿನಗಳಲ್ಲಿ 10 ಪ್ರಾಂತೀಯ ಮಟ್ಟದ ಪ್ರದೇಶಗಳಲ್ಲಿ ಸ್ಥಳೀಯವಾಗಿ ಹರಡುವ ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಈ ರೋಗ ಮರುಕಳಿಸುವ ಅಪಾಯ ಮತ್ತು ಸಾಂಕ್ರಾಮಿಕ ಆರೋಗ್ಯ ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ(ಎನ್‌ಎಚ್‌ಸಿ) ವಕ್ತಾರ ಮಿಫೆಂಗ್ ಹೇಳಿದ್ದಾರೆ’ ಎಂದು ರಾಜ್ಯದ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾನುವಾರವಷ್ಟೇ ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ. ವಿದೇಶದಿಂದ ಬಂದ ಚೀನಾದ ನಾಗರಿಕರಲ್ಲಿ ಈ ಮೂರೂ ಪ್ರಕರಣಗಳು ಕಾಣಿಸಿಕೊಂಡಿವೆ. ಹೊರಗಿನವರ ಸಂಪರ್ಕದಿಂದ ಕಾಣಿಸಿಕೊಂಡ ಪ್ರಕರಣಗಳು ಸೇರಿ ಒಟ್ಟು 13 ಹೊಸ ಪ್ರಕರಣಗಳು ವರದಿಯಾಗಿವೆ. ಭಾನುವಾರದ ಹೊತ್ತಿಗೆ ವಿದೇಶದಿಂದ ಬಂದ 98 ಮಂದಿ ಸೇರಿದಂತೆ ಒಟ್ಟು 962 ಮಂದಿಯನ್ನು ವೈದ್ಯಕೀಯ ವೀಕ್ಷಣೆಯಲ್ಲಿ ಇಡಲಾಗಿದೆ. ಇವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಇಲ್ಲ ಎಂದು ಎನ್‌ಎಚ್‌ಸಿ ತಿಳಿಸಿದೆ.

ADVERTISEMENT

ಲಕ್ಷಣ ರಹಿತ ಪ್ರಕರಣಗಳಲ್ಲಿ ರೋಗಿಗಳಿಗೆ ಜ್ವರ, ಕೆಮ್ಮು, ಒಣಗಿದ ಗಂಟಲಿನಂಥ ಯಾವುದೇ ಲಕ್ಷಣಗಳು ಇರುವುದಿಲ್ಲ. ಆದರೆ, ಇವರು ಒಬ್ಬರಿಂದ ಮತ್ತೊಬ್ಬರಿಗೆ ಸೋಂಕನ್ನು ಹರಡುವ ಅಪಾಯವಿದೆ.

ಬೀಜಿಂಗ್‌ನಲ್ಲಿ ಅನೇಕ ಕಚೇರಿಗಳು, ವಾಣಿಜ್ಯ ಚಟುವಟಿಕೆ, ಪ್ರವಾಸಿ ತಾಣಗಳನ್ನು ಪುನಃ ಆರಂಭಿಸಲಾಗಿದ್ದರೂ, ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕಾಗಿ ಸಿನಿಮಾ ಮಂದಿರ, ರಂಗಮಂದಿರ, ಆರ್ಕೇಡ್ಸ್‌ಗಳನ್ನುತೆರೆಯಲು ಅನುಮತಿ ನೀಡಿಲ್ಲ.

ಚೀನಾದಲ್ಲಿ ಭಾನುವಾರ ಯಾವುದೇ ಹೊಸ ಸಾವಿನ ಪ್ರಕರಣ ವರದಿಯಾಗಿಲ್ಲ. ಇದುವರೆಗೆ ಕೋವಿಡ್‌–19ನಿಂದ ಸಾವನ್ನಪ್ಪಿದವರ ಸಂಖ್ಯೆ 4,633 ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.