ADVERTISEMENT

ಕೋವಿಡ್ -19 | ಈ ಸಮಯದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಸುರಕ್ಷಿತವೇ?

ಏಜೆನ್ಸೀಸ್
Published 11 ಆಗಸ್ಟ್ 2020, 11:05 IST
Last Updated 11 ಆಗಸ್ಟ್ 2020, 11:05 IST
ಸಾಂದರ್ಭಿಕ ಚಿತ್ರ (ಎಎಫ್‌ಪಿ ಚಿತ್ರ)
ಸಾಂದರ್ಭಿಕ ಚಿತ್ರ (ಎಎಫ್‌ಪಿ ಚಿತ್ರ)   

ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಸುರಕ್ಷಿತವೇ?

ಈ ಪ್ರಶ್ನೆಗೆ ಉತ್ತರ ಹಲವು ವಿಚಾರಗಳ ಮೇಲೆ ಅವಲಂಬಿತವಾಗಿದೆಯಾದರೂ, ಅಪಾಯವನ್ನು ತಡೆಗಟ್ಟಲು ಅನೇಕ ಮಾರ್ಗಗಳಂತೂ ಇದ್ದೇಇವೆ.

ಜನರೊಂದಿಗೆ ಮಾತನಾಡುವಾಗ ಸೀನುವುದು ಅಥವಾ ಕೆಮ್ಮುವುದರಿಂದ ಹೊರಬರುವ ಉಗುಳಿನ ಮೂಲಕ ವೈರಸ್‌ ಹರಡುತ್ತದೆ. ಹೀಗಾಗಿ ಮಾಸ್ಕ್‌ ಧರಿಸುವುದು ಮತ್ತು ಇತರರಿಂದ ಕನಿಷ್ಠ 6 ಅಡಿಗಳಷ್ಟು ಅಂತರ ಕಾಪಾಡಿಕೊಳ್ಳುವುದು ವೈರಸ್‌ ಹರಡುವಿಕೆಯನ್ನು ನಿಯಂತ್ರಸಲು ಇರುವ ಉತ್ತಮ ಮಾರ್ಗವೆಂಬುದು ತಜ್ಞರ ಅಭಿಪ್ರಾಯ.

ಕೋವಿಡ್–19 ಸೋಂಕು ಹರಡುತ್ತಿರುವ ಈ ಸಮಯದಲ್ಲಿ ಪ್ರಪಂಚದಾದ್ಯಂತ ಸಾರಿಗೆ ವ್ಯವಸ್ಥೆಗಳಲ್ಲಿ ಹಲವು ನಿಯಮಗಳನ್ನು ಮಾಡಲಾಗಿದೆ. ಚಾಲಕರು, ಪ್ರಯಾಣಿಕರು ಮಾಸ್ಕ್‌ಗಳನ್ನು ಧರಿಸುವಂತೆ ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ, ಬಸ್‌ ಮತ್ತು ರೈಲು ಸಂಚಾರದ ವೇಳೆ ಜನದಟ್ಟಣೆ ಸಾಮಾನ್ಯವೇ ಆಗಿರುವುದರಿಂದ ವೈರಸ್‌ ಹರಡಬಹುದು. ಆದರೆ, ಅಪಾಯದ ಮಟ್ಟವನ್ನು ಕಡಿಮೆ ಮಾಡಲು ಕೆಲವು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

ADVERTISEMENT

ಅಮೆರಿಕದ ಸೋಂಕು ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಕೆಲವು ಸಲಹೆಗಳನ್ನು ನೀಡಿದೆ. ನಿಲ್ದಾಣಗಳಲ್ಲಿ, ಬಸ್‌ ಅಥವಾ ರೈಲುಗಳಲ್ಲಿ ಜನದಟ್ಟಣೆ ಇಲ್ಲದ ಸಮಯದಲ್ಲಿ ಪ್ರಯಾಣ ಬೆಳೆಸುವಂತೆ ಹೇಳಿದೆ. ಜೊತೆಗೆ ಅಂತಹ ಸಂದರ್ಭದಲ್ಲಿ ಮಧ್ಯದ ಆಸನಗಳನ್ನು ಖಾಲಿ ಬಿಟ್ಟು ಕೂರುವಂತೆ ಸಲಹೆ ನೀಡಿದೆ.

ಸಂಚರಿಸುವಾಗ ವಾಹನದಲ್ಲಿ ಅಥವಾ ನಿಲ್ದಾಣಗಳಲ್ಲಿ ಏನನ್ನೂ ಮುಟ್ಟಬಾರದು. ಸಾಧ್ಯವಾದರೆ, ಪ್ರಯಾಣಿಕರು ಹಿಡಿದುಕೊಳ್ಳಲು ಇರುವ ಹಿಡಿಕೆಗಳನ್ನೂ ಮುಟ್ಟದಿರುವುದು ಒಳ್ಳೆಯದು ಎಂದೂ ಕಿವಿಮಾತು ಹೇಳಿದೆ.

ವಾಹನಗಳನ್ನು ಸ್ವಚ್ಛಗೊಳಿಸಲು ಸಾರಿಗೆ ಇಲಾಖೆಗಳು ತಮ್ಮದೇ ಆದ ರೀತಿಯ ತಂತ್ರಗಳನ್ನು ಅನುಸರಿಸುತ್ತವೆ.

ರಷ್ಯಾದ ಮಾಸ್ಕೋ ಮತ್ತು ಚೀನಾದ ಶಾಂಗೈನಲ್ಲಿ ವೈರಾಣುಗಳನ್ನು ನಾಶ ಪಡಿಸಲು ನೇರಳಾತೀತ ಕಿರಣಗಳನ್ನು ಬಳಸಲಾಗುತ್ತದೆ. ಹಾಂಗ್‌ಕಾಂಗ್‌ನಲ್ಲಿ ಹೈಡ್ರೊಜೆನ್‌ ಪರಾಕ್ಸೈಡ್‌ ಸ್ಪ್ರೇ ಮಾಡಲು ರೋಬೊಟ್‌ಗಳನ್ನು ನಿಯೋಜಿಸಲಾಗಿದೆ. ನ್ಯೂಯಾರ್ಕ್‌ನಲ್ಲಿ ಸುರಂಗ ಮಾರ್ಗಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ರಾತ್ರಿ ವೇಳೆ ಸಂಚಾರ ನಿರ್ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.