ADVERTISEMENT

H-1B ವೀಸಾ ದುರುಪಯೋಗ: 175 ಪ್ರಕರಣಗಳ ತನಿಖೆಗೆ ಟ್ರಂಪ್ ಆಡಳಿತ ಆದೇಶ

ಪಿಟಿಐ
Published 8 ನವೆಂಬರ್ 2025, 7:28 IST
Last Updated 8 ನವೆಂಬರ್ 2025, 7:28 IST
H-1B visa
H-1B visa   

ನ್ಯೂಯಾರ್ಕ್: ಎಚ್‌–1ಬಿ ವೀಸಾ ದುರುಪಯೋಗವನ್ನು ಗಂಭೀರವಾಗಿ ಪರಿಗಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು, ಇಂಥ 175 ಪ್ರಕರಣಗಳ ತನಿಖೆಗೆ ಆದೇಶಿಸಿದೆ.

ಇದರಲ್ಲಿ ಕಡಿಮೆ ವೇತನ, ಹುದ್ದೆಯೇ ಇಲ್ಲದೆ ವೀಸಾ ವಿತರಣೆ ಹಾಗೂ ವೀಸಾ ಹೊಂದಿದ ನೌಕರರಿಗೆ ಕೆಲಸ ನೀಡದೆ ಕೂರಿಸಿ ವೀಸಾ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಅಮೆರಿಕದಲ್ಲಿರುವ ಉದ್ಯೋಗಾವಕಾಶಗಳನ್ನು ರಕ್ಷಿಸುವುದರ ಭಾಗವಾಗಿ ಈ ತನಿಖೆ ನಡೆಸಲಾಗುತ್ತಿದೆ ಎಂದು ಅಮೆರಿಕದ ಕಾರ್ಮಿಕ ಇಲಾಖೆ ಹೇಳಿದೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಕಾರ್ಮಿಕ ಇಲಾಖೆ ಕಾರ್ಯದರ್ಶಿ ಲೊರಿ ಚಾವೆಜ್‌ ಡೆರಿಮೆರ್‌ ಅವರ ನಾಯಕತ್ವದಲ್ಲಿ ಅಮೆರಿಕದವರಿಗೆ ನೌಕರಿ ಮೊದಲು ಎಂಬ ಗುರಿಯೊಂದಿಗೆ ಇಲಾಖೆ ಕೆಲಸ ಮಾಡುತ್ತಿದೆ’ ಎಂದಿದೆ.

ADVERTISEMENT

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಲೊರಿ ಚಾವೆಜ್‌ ಡೆರಿಮೆರ್‌, ‘ಅಮೆರಿಕದಲ್ಲಿರುವ ನೌಕರಿಗಳನ್ನು ರಕ್ಷಿಸುವ ಉದ್ದೇಶದೊಂದಿಗೆ ಎಚ್‌–1ಬಿ ವೀಸಾ ದುರುಪಯೋಗ ತಡೆಯಲು ಪ್ರತಿಯೊಂದು ಸಂಪನ್ಮೂಲವನ್ನೂ ರಕ್ಷಿಸಿಕೊಳ್ಳಲಾಗುವುದು. ನಮ್ಮ ಮಾನವ ಸಂಪನ್ಮೂಲವನ್ನು ರಕ್ಷಿಸಿ, ಪೋಷಿಸಲಾಗುವುದು. ಜತೆಗೆ ಉತ್ಕೃಷ್ಟ ಕೌಶಲದ ಉದ್ಯೋಗಗಳು ಅಮೆರಿಕದವರಿಗೇ ಮೊದಲು ಸಿಗಬೇಕು ಎಂಬದನ್ನು ಇಲಾಖೆ ಖಾತ್ರಿಪಡಿಸಲಿದೆ’ ಎಂದಿದ್ದಾರೆ.

ಅಮೆರಿಕದ ಎಚ್‌–1ಬಿ ವೀಸಾ ಪಡೆದವರಲ್ಲಿ ಭಾರತದ ಐಟಿ ಉದ್ಯೋಗಿಗಳು, ವೈದ್ಯರು ಮುಂಚೂಣಿಯಲ್ಲಿದ್ದಾರೆ. ಆದರೆ ಸದ್ಯ ತನಿಖೆಗೆ ಆದೇಶಿಸಿರುವ 175 ಪ್ರಕರಣಗಳು ಯಾವುವು ಎಂಬ ಮಾಹಿತಿಯನ್ನು ಇಲಾಖೆ ನೀಡಿಲ್ಲ.

ತನಿಖೆ ಕುರಿತು ಮಾಹಿತಿ ನೀಡಿರುವ ಫೆಡರಲ್ ಇಲಾಖೆ, ‘ತನಿಖೆಯ ಭಾಗವಾಗಿ ಕೆಲ ಮಾಹಿತಿಯನ್ನು ಹಂಚಿಕೊಳ್ಳಲಾಗಿಲ್ಲ. ಅತಿ ಹೆಚ್ಚು ವಿದ್ಯಾರ್ಹತೆ ಹೊಂದಿರುವ ವಿದೇಶದ ಹಲವು ಅಭ್ಯರ್ಥಿಗಳಿಗೆ ಹುದ್ದೆಗೆ ತಕ್ಕಂತೆ ವೇತನ ನೀಡಿಲ್ಲ ಎಂಬುದು ಪತ್ತೆಯಾಗಿದೆ’ ಎಂದಿದೆ.

‘ಎಚ್–1ಬಿ ವೀಸಾ ಹೊಂದಿರುವವರನ್ನು ಕೆಲಸದಿಂದ ವಜಾಗೊಳಿಸಿದರೆ, ಅಂಥವರ ಜಾಗಕ್ಕೆ ಅಮೆರಿಕದ ನಾಗರಿಕರಿಗೆ ಕಂಪನಿಗಳು ಮಾಹಿತಿಯನ್ನೇ ನೀಡಿ‌ಲ್ಲ ಎಂಬುದೂ ತಿಳಿದುಬಂದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಟ್ರಂಪ್ ಸರ್ಕಾರವು ಸೆ. 21ರಂದು ಹೊಸ ವೀಸಾ ನೀತಿಯನ್ನು ಘೋಷಿಸಿದ್ದು, ಇದರನ್ವಯ ಎಚ್‌–1ಬಿ ವೀಸಾ ಪಡೆಯಲು 1ಲಕ್ಷ ಅಮೆರಿಕನ್ ಡಾಲರ್‌ ಸುಂಕವನ್ನು ಅಧ್ಯಕ್ಷ ಟ್ರಂಪ್ ವಿದಿಸಿದ್ದು ಭಾರೀ ಸುದ್ದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.