ADVERTISEMENT

ಉಕ್ರೇನ್‌ ಯುದ್ಧ | ಭಾರತ ಪರೋಕ್ಷ ಕಾರಣ: ಡೊನಾಲ್ಡ್ ಟ್ರಂಪ್

ವಿಶ್ವಸಂಸ್ಥೆಯನ್ನೂ ಟೀಕಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಏಜೆನ್ಸೀಸ್
Published 23 ಸೆಪ್ಟೆಂಬರ್ 2025, 23:55 IST
Last Updated 23 ಸೆಪ್ಟೆಂಬರ್ 2025, 23:55 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಿಶ್ವಸಂಸ್ಥೆ: ಭಾರತ ಹಾಗೂ ಚೀನಾವು ರಷ್ಯಾದ ತೈಲ ಖರೀದಿಸುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಪರೋಕ್ಷವಾಗಿ ಹಣಕಾಸು ನೆರವು ನೀಡುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.

ನ್ಯೂಯಾರ್ಕ್‌ ನಗರದಲ್ಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 150ಕ್ಕೂ ಹೆಚ್ಚು ವಿಶ್ವ ನಾಯಕರು ಹಾಗೂ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳ ಮುಂದೆಯೇ ಮಂಗಳವಾರ ಮಾತನಾಡಿದ ಅವರು, ವಿಶ್ವಸಂಸ್ಥೆಯನ್ನೂ ತರಾಟೆಗೆ ತೆಗೆದುಕೊಂಡರು. ‘ವಿಶ್ವಸಂಸ್ಥೆಯು ಪ್ರಬುದ್ಧವಾದ ಪದಗಳಲ್ಲಿ ಪತ್ರ ಬರೆಯುತ್ತದೆ. ಆದರೆ, ಅದನ್ನು ಪಾಲಿಸುವುದಿಲ್ಲ. ಖಾಲಿ ಮಾತುಗಳು ಯುದ್ಧಗಳನ್ನು ನಿಲ್ಲಿಸುವುದಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

‘ವಿಶ್ವಸಂಸ್ಥೆಯು ಅಗಾಧವಾದ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಅದು ಆ ಸಾಮರ್ಥ್ಯಕ್ಕೆ ಹತ್ತಿರವೂ ಬರುತ್ತಿಲ್ಲ’ ಎಂದು ಟೀಕಿಸಿದ್ದಾರೆ.

‘ವಿಶ್ವದಾದ್ಯಂತ ಅತ್ಯಂತ ಜನಾಕರ್ಷಕ ದೇಶ ಅಮೆರಿಕ. ಜಗತ್ತಿನ ಯಾವ ದೇಶವೂ ಈ ವಿಷಯದಲ್ಲಿ ನಮಗೆ ಸಾಟಿ ಇಲ್ಲ’ ಎಂದರು.

ಯಾವುದೇ ರಾಷ್ಟ್ರವು ಈ ರೀತಿ ಬಣ್ಣಿಸಿಕೊಳ್ಳುವುದನ್ನು ವಿಶ್ವಸಂಸ್ಥೆಯು ಒಪ್ಪುವುದಿಲ್ಲ. ಇತ್ತೀಚೆಗೆ ಇಂಗ್ಲೆಂಡ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಟ್ರಂಪ್ ಇದೇ ರೀತಿ ಬಣ್ಣಿಸಿಕೊಂಡಿದ್ದರು.

‘ಯುದ್ಧ ನಿಲ್ಲಿಸಿದ್ದು ನಾನೇ’: ‘ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದು ನಾನೇ. ಈ ಯುದ್ಧವೂ ಸೇರಿದಂತೆ ಏಳು ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ನೊಬೆಲ್ ಶಾಂತಿ ಪುರಸ್ಕಾರಕ್ಕೆ
ನನ್ನನ್ನು ಪರಿಗಣಿಸಬೇಕು ’ ಎಂದು ಟ್ರಂಪ್‌ ಅವರು ಪುನರುಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.