ಶಶಿ ತರೂರ್
(ಪಿಟಿಐ ಚಿತ್ರ)
ನವದೆಹಲಿ: ರಷ್ಯಾದಿಂದ ತೈಲ ಖರೀದಿಗೆ ಪ್ರತಿಯಾಗಿ ಭಾರತದ ಮೇಲೆ ಹೆಚ್ಚುವರಿ ಸುಂಕ ಹೇರಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಖಂಡಿಸಿದ್ದಾರೆ.
'ಅಮೆರಿಕ ಅಧ್ಯಕ್ಷರು 'ದ್ವಂದ್ವ ನಿಲುವು' ಹೊಂದಿದ್ದು, ಅಮೆರಿಕದಲ್ಲಿನ ಬಹಳಷ್ಟು ಮಂದಿಗೆ ಭಾರತದ ಸರಕುಗಳು ಕೈಗೆಟಕದಂತೆ ಮಾಡಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ರಷ್ಯಾದಿಂದ ಭಾರತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಚೀನಾ ಆಮದು ಮಾಡಿಕೊಳ್ಳುತ್ತಿದೆ. ಆದರೂ ಚೀನಾಕ್ಕೆ ಸುಂಕ ಹೇರಿಕೆಯಿಂದ 90 ದಿನಗಳ ವಿನಾಯಿತಿ ದೊರಕಿದೆ' ಎಂದು ಅವರು ಹೇಳಿದ್ದಾರೆ.
'ರಷ್ಯಾದಿಂದ ಯುರೇನಿಯಂ ಸೇರಿದಂತೆ ಅನೇಕ ವಸ್ತುಗಳನ್ನು ಅಮೆರಿಕ ಆಮದು ಮಾಡಿಕೊಳ್ಳುತ್ತಿದೆ. ದುರದೃಷ್ಟವಶಾತ್ ಇದರಲ್ಲಿ ನಿರ್ದಿಷ್ಟವಾದ ದ್ವಂದ ನಿಲುವು ಇದೆ. ಇದು ಉತ್ತಮವಾದ ಬೆಳವಣಿಗೆಯಲ್ಲ' ಎಂದು ಹೇಳಿದ್ದಾರೆ.
'ಈ ಅನುಭವದಿಂದ ನಾವು ಪಾಠವನ್ನು ಕಲಿತು ಅದಕ್ಕೆ ತಕ್ಕಂತೆ ವರ್ತಿಸಬೇಕು. ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೂ ಪ್ರತಿ ಸುಂಕ ವಿಧಿಸುವ ಒತ್ತಡ ನಮ್ಮ ಮೇಲಿದೆ. ಈ ಸಂದರ್ಭದಲ್ಲಿ ಬೇರೆ ವ್ಯಾಪಾರ ಪಾಲುದಾರ ರಾಷ್ಟ್ರಗಳತ್ತವೂ ಗಮನ ಹರಿಸುವುದು ಒಳಿತು' ಎಂದಿದ್ದಾರೆ.
'ನಿಸ್ಸಂಶವಾಗಿಯೂ ನಮ್ಮ ಪಾಲಿಗಿದು ಉತ್ತಮ ಸುದ್ದಿಯಲ್ಲ. ಹೆಚ್ಚುವರಿ ಶೇ 25ರಷ್ಟು ಸುಂಕದೊಂದಿಗೆ ಭಾರತದ ಮೇಲೆ ಅಮೆರಿಕ ಒಟ್ಟು ಶೇ 50ರಷ್ಟು ಸುಂಕ ಹೇರಿದೆ. ಬಾಂಗ್ಲಾದೇಶ, ಪಾಕಿಸ್ತಾನ, ಫಿಲಿಪ್ಪೀನ್ಸ್, ಇಂಡೋನೇಷ್ಯಾ ಅಥವಾ ವಿಯೆಟ್ನಾಂ ದೇಶಗಳ ಮೇಲೆ ಕಡಿಮೆ ಸುಂಕ ಇದ್ದು, ಇದು ಭಾರತದ ಸರಕುಗಳ ಮೇಲೆ ಪರಿಣಾಮ ಬೀರಲಿದೆ' ಎಂದು ಹೇಳಿದ್ದಾರೆ.
'ನಾವು ಇತರೆ ದೇಶಗಳತ್ತವೂ ಗಮನ ಹರಿಸಬೇಕಿದೆ. ಬ್ರಿಟನ್ ಜೊತೆ ಮುಕ್ತ ವ್ಯಾಪಾರ ಒಪ್ಪಂದವನ್ನು ಹೊಂದಿದ್ದೇವೆ. ಐರೋಪ್ಯ ಒಕ್ಕೂಟದ ಜೊತೆಗೂ ಮಾತುಕತೆಯಲ್ಲಿದ್ದೇವೆ. ಇತರೆ ದೇಶಗಳೊಂದಿಗೆ ಉತ್ತಮ ವ್ಯಾಪಾರ ಬಾಂಧವ್ಯ ಹೊಂದುವ ನಿರೀಕ್ಷೆಯಿದೆ. ಆದರೆ ಅಲ್ಪಾವಧಿಯಲ್ಲಿ ಇದು ನಿಜಕ್ಕೂ ಹೊಡೆತವಾಗಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.