ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್/ವಾಷಿಂಗ್ಟನ್: ವ್ಯಾಪಾರ ವಿಷಯವನ್ನು ಮುಂದಿಟ್ಟುಕೊಂಡು ಭಾರತ ಹಾಗೂ ಪಾಕಿಸ್ತಾನ ನಡುವಣ ಸಂಘರ್ಷವನ್ನು ಶಮನಗೊಳಿಸಲಾಯಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಗದೊಮ್ಮೆ ಪುನರುಚ್ಚರಿಸಿದ್ದಾರೆ.
ಯುದ್ಧ ಕೊನೆಗಾಣಿಸಲು ಸುಂಕ ಹೇರಿಕೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು ಎಂಬುದರ ಕುರಿತು ಮಾತನಾಡಿರುವ ಟ್ರಂಪ್, ಇದೇ ವಿಷಯವನ್ನು ಪ್ರಸ್ತಾಪಿಸಿ ಪರಮಾಣು ಸಾಮರ್ಥ್ಯದ ಭಾರತ ಹಾಗೂ ಪಾಕಿಸ್ತಾನ ನಡುವಣ ಯುದ್ಧವನ್ನು ಕೊನೆಗೊಳಿಸಲಾಯಿತು ಎಂದಿದ್ದಾರೆ.
'ಅಮೆರಿಕದ ಪಾಲಿಗೆ ಸುಂಕ ಅತ್ಯಂತ ಮಹತ್ವದೆನಿಸಿದೆ. ಸುಂಕದಿಂದ ನೂರಾರು ಶತಕೋಟಿ ಡಾಲರ್ ಗಳಿಸುವುದಲ್ಲದೆ ಸುಂಕಗಳಿಂದಾಗಿಯೇ ನಾವು ಶಾಂತಿಪಾಲಕರಾಗಿದ್ದೇವೆ' ಎಂದು ಹೇಳಿದ್ದಾರೆ.
'ಒಂದು ವೇಳೆ ಸುಂಕದ ಶಕ್ತಿ ಬಳಸದಿದ್ದರೆ ನಾಲ್ಕು ಯುದ್ಧಗಳು ಇನ್ನೂ ನಡೆಯುತ್ತಿದ್ದವು' ಎಂದೂ ಟ್ರಂಪ್ ಹೇಳಿದ್ದಾರೆ.
'ಯುದ್ಧಗಳನ್ನು ನಿಲ್ಲಿಸಲು ಸುಂಕ ನೀತಿ ಬಳಕೆ ಮಾಡಿದ್ದೇನೆ. ನೀವು ಅಣ್ವಸ್ತ್ರ ಸಾಮರ್ಥ್ಯದ ಭಾರತ ಹಾಗೂ ಪಾಕಿಸ್ತಾನ ವಿಚಾರ ನೋಡಿದರೆ ಅವರು ಯುದ್ಧ ಮುಂದುವರಿಸಲು ಸಿದ್ಧರಿದ್ದರು. ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಯುದ್ಧ ನಿಲ್ಲಿಸಲು ನಾನು ಏನನ್ನು ಹೇಳಿದ್ದೇನೆಂದು ತಿಳಿಸಲು ಇಚ್ಚಿಸುವುದಿಲ್ಲ. ಆದರೆ ಅದು ತುಂಬಾ ಪರಿಣಾಮಕಾರಿಯಾಗಿತ್ತು. ಅದರಿಂದಾಗಿಯೇ ಯುದ್ಧ ನಿಲ್ಲಿಸಲಾಯಿತು. ಅದು ಸುಂಕ ಹಾಗೂ ವ್ಯಾಪಾರವನ್ನು ಆಧರಿಸಿತ್ತು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.