ADVERTISEMENT

ನೊಬೆಲ್‌ ಶಾಂತಿ ಪ್ರಶಸ್ತಿಗೆ ಟ್ರಂಪ್ ನಾಮನಿರ್ದೇಶನ ಮಾಡಿದ ಅಮೆರಿಕ ಸಂಸದ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜೂನ್ 2025, 6:06 IST
Last Updated 25 ಜೂನ್ 2025, 6:06 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

– ರಾಯಿಟರ್ಸ್

ವಾಷಿಂಗ್ಟನ್: ಇಸ್ರೇಲ್ ಮತ್ತು ಇರಾನ್ ನಡುವಿನ ಕದನ ವಿರಾಮ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಸಂಸದರೊಬ್ಬರು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ‘ಫಾಕ್ಸ್ ನ್ಯೂಸ್’ ವರದಿ ಮಾಡಿದೆ.

ADVERTISEMENT

ಬಡ್ಡಿ ಕಾರ್ಟರ್ ಬರೆದಿರುವ ಪತ್ರ

‘ಇಸ್ರೇಲ್ ಹಾಗೂ ಇರಾನ್ ನಡುವಿನ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವಲ್ಲಿ, ಇರಾನ್ ಅತ್ಯಂತ ಮಾರಕ ಆಯುಧವನ್ನು ಪಡೆಯುವುದನ್ನು ತಡೆಯುವಲ್ಲಿ ಟ್ರಂಪ್ ಅವರು ಅಸಾಧಾರಣ ಮತ್ತು ಐತಿಹಾಸಿಕ ಪಾತ್ರ ಹೊಂದಿದ್ದಾರೆ ಎಂದು ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಬಡ್ಡಿ ಕಾರ್ಟರ್, ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ ಪತ್ರ ಬರೆದಿದ್ದಾರೆ.

‘ಅಸಾಧ್ಯವೆಂದು ಹಲವರು ನಂಬಿದ್ದ ಒಪ್ಪಂದವನ್ನು ತ್ವರಿತ ರೂಪಿಸುವಲ್ಲಿ ಟ್ರಂಪ್ ಅವರ ಪ್ರಭಾವ ಪ್ರಮುಖ ಪಾತ್ರ ವಹಿಸಿತು. ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳನ್ನು ತಡೆಯಲು, ಭಯೋತ್ಪಾದನೆಯ ವಿಶ್ವದ ಅತಿದೊಡ್ಡ ಪ್ರಾಯೋಜಕ ರಾಷ್ಟ್ರ ಪರಮಾಣು ಶಸ್ತ್ರಾಸ್ತ್ರವನ್ನು ಪಡೆಯಲು ಅಸಾಧ್ಯವಾಗುವಂತೆ ನೋಡಿಕೊಳ್ಳಲು ನಿರ್ಣಾಯಕ ಕ್ರಮಗಳನ್ನು ಟ್ರಂಪ್ ತೆಗೆದುಕೊಂಡಿದ್ದಾರೆ’ ಎಂದು ಕಾರ್ಟರ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

‘ಐತಿಹಾಸಿಕ ದ್ವೇಷ ಮತ್ತು ರಾಜಕೀಯ ಚಂಚಲತೆಯಿಂದ ಬಳಲುತ್ತಿರುವ ಪ್ರದೇಶದಲ್ಲಿ ಇಂಥ ತೀರ್ಮಾನ ತೆಗೆದುಕೊಳ್ಳಲು ಧೈರ್ಯ ಮತ್ತು ಸ್ಪಷ್ಟತೆ ಎರಡನ್ನೂ ಅಗತ್ಯವಿದೆ. ಟ್ರಂಪ್ ಎರಡನ್ನೂ ಪ್ರದರ್ಶಿಸಿ, ಜಗತ್ತಿಗೆ ಭರವಸೆಯ ಅಪರೂಪದ ನೋಟವನ್ನು ನೀಡಿದರು. ಈ ಕಾರಣಗಳಿಗಾಗಿ, ಅಮೆರಿಕದ 47ನೇ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಪರಿಗಣಿಸಲು ನಾನು ಗೌರವಯುತವಾಗಿ ಕೋರುತ್ತೇನೆ’ ಎಂದು ಬರೆದಿದ್ದಾರೆ.

ಈ ಹಿಂದೆ ಪಾಕಿಸ್ತಾನ ಕೂಡ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.