
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ದಾಳಿ ನಡೆಸಿದ ಅಮೆರಿಕ ಪಡೆ
ಎಕ್ಸ್ ಚಿತ್ರ
ವೆಸ್ಟ್ ಪಾಮ್ ಬೀಚ್: ಕ್ರೈಸ್ತರಿಗೆ ರಕ್ಷಣೆ ನೀಡುವಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರ ವಿಫಲವಾಗಿದೆ ಎಂದು ಕಳೆದ ಒಂದು ವಾರದಿಂದ ಆರೋಪಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೈಜಿರಿಯಾದಲ್ಲಿದೆ ಎನ್ನಲಾದ ಇಸ್ಲಾಮಿಕ್ ಸ್ಟೇಟ್ ಪಡೆಗಳ ನೆಲೆಗಳ ಮೇಲೆ ಕ್ರಿಸ್ಮಸ್ ದಿನದಂದು ‘ಪ್ರಬಲ ಹಾಗೂ ಮಾರಕ’ ದಾಳಿಗೆ ಆದೇಶಿಸಿದ್ದಾರೆ.
ಕ್ರಿಸ್ಮಸ್ ದಿನದಂದು ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ಅನ್ನು ಟ್ರಂಪ್ ಹಂಚಿಕೊಂಡಿದ್ದಾರೆ. ಆದರೆ ದಾಳಿಯ ಕುರಿತು ಯಾವುದೇ ಮಾಹಿತಿ ಅಥವಾ ದಾಳಿಯಿಂದ ಆಗಿರುವ ಹಾನಿಯ ಕುರಿತು ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಆದರೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಆಫ್ರಿಕಾದಲ್ಲಿರುವ ಅಮೆರಿಕದ ಕಮಾಂಡ್ ಮಾಹಿತಿ ಹಂಚಿಕೊಂಡಿದ್ದು, ‘ಸೊಬೊಟೊ ಸ್ಟೇಟ್‌ನಲ್ಲಿರುವ ನೈಜಿರಿಯಾದ ಅಧಿಕಾರಿಗಳ ಕೋರಿಕೆ ಮೇಲೆ ಐಎಸ್‌ಐಎಸ್ ಭಯೋತ್ಪಾದಕರಿಗೆ ಸೇರಿದ ಹಲವು ತಾಣಗಳ ಮೇಲೆ ದಾಳಿ ನಡೆಸಲಾಗಿದೆ. ಈ ತಾಣಗಳಲ್ಲಿ ಅಡಗಿದ್ದ ಹಲವರು ದಾಳಿಯಲ್ಲಿ ಮೃತಪಟ್ಟಿದ್ದಾರೆ’ ಎಂದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಟ್ರಂಪ್, ‘ನನ್ನ ನಿರ್ದೇಶನದ ಮೇರೆಗೆ ಅಮೆರಿಕದ ಸೇನಾ ಮುಖ್ಯಸ್ಥರು ನೈಜೀರಿಯಾದಲ್ಲಿರುವ ಐಸಿಸ್ ಭಯೋತ್ಪಾದಕರು ಎಂಬ ಕಲ್ಮಶದ ವಿರುದ್ಧ ಪ್ರಬಲ ಹಾಗೂ ಮಾರಕ ದಾಳಿ ನಡೆಸಿದ್ದಾರೆ. ಐಸಿಸ್ ಉಗ್ರರು ಅಮಾಯಕ ಕ್ರೈಸ್ತರನ್ನು ಗುರಿಯಾಗಿಸಿ ಕ್ರೂರವಾಗಿ ಕೊಲ್ಲುತ್ತಿದ್ದಾರೆ. ಇಂಥ ಕ್ರೂರತನವನ್ನು ಶತಮಾನಗಳಲ್ಲೂ ಕಂಡಿಲ್ಲ’ ಎಂದಿದ್ದಾರೆ.
ದಾಳಿಯ ಮಾಹಿತಿಯ ಗೋಪ್ಯತೆಯನ್ನು ಉಲ್ಲೇಖಿಸಿರುವ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ‘ಈ ದಾಳಿಯಲ್ಲಿ ಅಮೆರಿಕ ಸೇನೆಯು ನೈಜಿರಿಯಾದೊಂದಿಗೆ ಕೆಲಸ ಮಾಡಿತು. ಇದನ್ನು ಅಮೆರಿಕ ಸರ್ಕಾರ ಅನುಮೋದಿಸಿದೆ’ ಎಂದಿದ್ದಾರೆ.
ನೈಜೀರಿಯಾದ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿ, ‘ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಗುಪ್ತಚರ ಮಾಹಿತಿ ವಿನಿಮಯ ಮತ್ತು ಕಾರ್ಯತಂತ್ರದಲ್ಲಿ ಸಮನ್ವಯ ಸಾಧಿಸಿ ಈ ದಾಳಿ ನಡೆಸಲಾಗಿದೆ. ಇದರಲ್ಲಿ ಪರಸ್ಪರ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಗೌರವ, ಜಾಗತಿಕ ಭದ್ರತೆಯ ಬದ್ಧತೆಗಳು ಅಡಗಿವೆ’ ಎಂದಿದೆ.
‘ಕ್ರೈಸ್ತರು, ಮುಸ್ಲಿಮರು ಅಥವಾ ಇತರ ಸಮುದಾಯಗಳನ್ನು ಗುರಿಯಾಗಿಸಿ ಯಾವುದೇ ರೀತಿಯ ಭಯೋತ್ಪಾದಕ ಹಿಂಸಾಚಾರ ನಡೆದರೂ ಅದು ನೈಜೀರಿಯಾದ ಮೌಲ್ಯಗಳಿಗೆ ಮತ್ತು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅವಮಾನವಾಗಿದೆ’ ಎಂದು ಮಾಹಿತಿ ನೀಡಿದೆ.
ನೈಜೀರಿಯಾದಲ್ಲಿ ಕ್ರೈಸ್ತರ ಮೇಲಾಗುತ್ತಿರುವ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವಂತೆ ಕಳೆದ ತಿಂಗಳು ಪೆಂಟಗನ್‌ನಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಅವರು ಅಧಿಕಾರಿಗಳಿಗೆ ಹೇಳಿದ್ದರು. ನೈಜೀರಿಯಾದವರಿಗೆ ನೀಡುತ್ತಿದ್ದ ವೀಸಾವನ್ನು ನಿರ್ಬಂಧಿಸುವುದಾಗಿ ಅಮೆರಿಕದ ಗೃಹ ಇಲಾಖೆ ಹೇಳಿತ್ತು.
‘ಈ ಭಯೋತ್ಪಾದಕರಿಗೆ ಈ ಮೊದಲೇ ನಾನು ಎಚ್ಚರಿಕೆ ನೀಡಿದ್ದೆ. ಕ್ರೈಸ್ತರ ನರಮೇಧ ನಿಲ್ಲಿಸದಿದ್ದರೆ ನರಕಕ್ಕೆ ಕಳುಹಿಸುವುದಾಗಿ ಹೇಳಿದ್ದೆ. ಅದು ಇಂದು ರಾತ್ರಿ ನಡೆದಿದೆ. ಐಸಿಸ್‌ಗಳ ನೆಲೆಯನ್ನು ಗುರಿಯಾಗಿಸಿ ನಿಖರ ದಾಳಿ ನಡೆದಿದ್ದು, ಅದನ್ನು ಅಮೆರಿಕ ಮಾತ್ರ ಮಾಡಲು ಸಾಧ್ಯ’ ಎಂದು ಟ್ರಂಪ್ ಹೇಳಿದ್ದಾರೆ.
22 ಕೋಟಿ ಜನಸಂಖ್ಯೆ ಹೊಂದಿರುವ ನೈಜೀರಿಯಾದಲ್ಲಿ ಮುಸ್ಲಿಮರು ಹಾಗೂ ಕ್ರೈಸ್ತರು ಸಮ ಸಂಖ್ಯೆಯಲ್ಲಿದ್ದಾರೆ. ದೇಶದಲ್ಲಿ ಬೊಕೊ ಹರಾಮ್ ಎಂಬ ತೀವ್ರವಾದಿ ಗುಂಪು ಇಸ್ಲಾಮಿಕ್ ಕಾನೂನನ್ನು ಜಾರಿಗೆ ತರಲು ಯತ್ನಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.