ಮೋದಿ ಹಾಗೂ ಟ್ರಂಪ್
–ಸಂಗ್ರಹ ಚಿತ್ರ
ಶರ್ಮ್ ಅಲ್ ಶೇಖ್ (ಈಜಿಪ್ಟ್): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ. ‘ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ’ ಎಂದು ಮೋದಿ ಹೆಸರೆತ್ತದೆ ಅವರು ಹೇಳಿದ್ದಾರೆ.
ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಿದ ‘ಗಾಜಾ ಕದನ ವಿರಾಮ‘ದ ಬಳಿಕ ಇಲ್ಲಿ ನಡೆಯುತ್ತಿದ್ದ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಟ್ರಂಪ್ ಭಾಷಣ ಮಾಡಿದ್ದಾರೆ. ಅಲ್ಲದೆ ಭಾರತ ಹಾಗೂ ಪಾಕಿಸ್ತಾನವು ಒಟ್ಟಿಗೆ ಸಾಗುತ್ತವೆ ಎಂದು ಭಾವಿಸುವೆ’ ಎಂದಿದ್ದಾರೆ.
‘ಭಾರತವು ಶ್ರೇಷ್ಠ ದೇಶವಾಗಿದ್ದು, ನನ್ನ ಉತ್ತಮ ಸ್ನೇಹಿತ ಅಗ್ರಸ್ಥಾನದಲ್ಲಿದ್ದಾರೆ. ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ಒಟ್ಟಿಗೆ ಸಾಗುತ್ತದೆ ಎಂದು ಭಾವಿಸುವೆ’ ಎಂದು ಪಕ್ಕದಲ್ಲೇ ಇದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರನ್ನು ನೋಡಿದರು. ಶೆಹಬಾಜ್ ಮೆಲುನಗೆ ಬೀರಿದರು.
ಅದಕ್ಕೂ ಮುನ್ನ ಶರೀಫ್ ಅವರನ್ನು ಟ್ರಂಪ್ ಹೊಗಳಿದರು. ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರನ್ನು ‘ನನ್ನ ನೆಚ್ಚಿನ ಫೀಲ್ಡ್ ಮಾರ್ಷಲ್‘ ಎಂದು ಸಂಬೋಧಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಲು ಶರೀಫ್ ಅವರನ್ನು ಆಹ್ವಾನಿಸಿದರು.
ಟ್ರಂಪ್ ಅವರ ಅವಿರತ ಹಾಗೂ ನಿರಂತರ ಪ್ರಯತ್ನದಿಂದಾಗಿ ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಯಾಗಿದೆ ಎಂದು ಶರೀಫ್ ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿ, ಕದನ ವಿರಾಮ ಸ್ಥಾಪಿಸಲು ಅದ್ಭುತ ಕೊಡುಗೆ ನೀಡಿದ್ದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪಾಕಿಸ್ತಾನ ಶಾಂತಿ ನೊಬೆಲ್‌ಗೆ ನಾಮನಿರ್ದೇಶನ ಮಾಡಿತ್ತು. ದಕ್ಷಿಣ ಏಷ್ಯಾ ಮಾತ್ರವಲ್ಲ ಮಧ್ಯಪ್ರಾಚ್ಯದಲ್ಲಿ ಲಕ್ಷಾಂತರ ಜೀವಗಳನ್ನು ರಕ್ಷಿಸಿದ್ದಕ್ಕಾಗಿ ಟ್ರಂಪ್ ಅವರನ್ನು ಮತ್ತೆ ಶಾಂತಿ ನೊಬೆಲ್‌ಗೆ ನಾಮನಿರ್ದೇಶನ ಮಾಡಲಾಗುವುದು ಎಂದು ಶರೀಫ್ ಹೇಳಿದ್ದಾರೆ.
‘ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ. ನಾನು ಮಾಡಿದ್ದು ಶಾಂತಿ ನೊಬೆಲ್‌ಗೆ ಅಲ್ಲ’ ಎಂದು ಈ ವರ್ಷದ ಶಾಂತಿ ನೊಬೆಲ್ ತಪ್ಪಿದ ಬಳಿಕ ಟ್ರಂಪ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.